ಪುತ್ತೂರು, ಮಾ.12 : ಸಂಟ್ಯಾರ್ನಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಹಲವು ಬೈಕ್ಗಳಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾದ ಕಾರನ್ನು ಬಳಿಕ ಪೆರಿಗೇರಿ ಸಮೀಪ ಸ್ಥಳೀಯ ಯುವಕರು ತಡೆದು ನಿಲ್ಲಿಸಿದ ಘಟನೆ ಗುರುವಾರ ಸಂಜೆ ನಡೆದಿದೆ. ಪುತ್ತೂರಿನಿಂದ ತೆರಳುತ್ತಿದ್ದ ಸ್ವಿಫ್ಟ್ ಕಾರು (ಕೆಎ 04 ಎಮ್ಎಲ್ 4745) ಸಂಟ್ಯಾರ್ ಪ್ರದೇಶದಲ್ಲಿ ಮೊದಲು ಬೈಕೊಂದಕ್ಕೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಪಾಣಾಜೆ ರಸ್ತೆಯ ಕಡೆಗೆ ಸಾಗಿದೆ.

ಬಳಿಕ ಸಂಟ್ಯಾರ್ ಜಂಕ್ಷನ್ನಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಹಲವು ಬೈಕ್ಗಳಿಗೆ ಕಾರು ಡಿಕ್ಕಿ ಹೊಡೆದಿದೆ.ಡಿಕ್ಕಿಯ ಭಾರೀ ರಭಸಕ್ಕೆ ಸುಮಾರು 6 ಬೈಕ್ಗಳು ನಜ್ಜುಗುಜ್ಜಾಗಿದ್ದು, ಕೆಲವು ಬೈಕ್ಗಳು ಚರಂಡಿಗೆ ಬಿದ್ದಿವೆ. ಘಟನೆಯ ನಂತರ ಕಾರಿನ ಚಾಲಕ ಅತಿಯಾದ ವೇಗದಲ್ಲಿ ಅಲ್ಲಿಂದಲೇ ಪರಾರಿಯಾಗಿದ್ದಾನೆ. ಸ್ಥಳೀಯರು ಕಾರನ್ನು ನಿಲ್ಲಿಸಲು ಪ್ರಯತ್ನಪಟ್ಟರೂ ಚಾಲಕ ನಿಲ್ಲಿಸದೆ ಮುಂದಕ್ಕೆ ಸಾಗಿದ್ದಾನೆ.ಸಂಟ್ಯಾರ್ನಿಂದ ಚೆಲ್ಯಡ್ಕ–ಉಪ್ಪಳಿಗೆ–ಕೌಡಿಚ್ಚಾರ್ ಮೂಲಕ ಪಟ್ಟೆ ಕಡೆಗೆ ಸಾಗುತ್ತಿದ್ದ ಕಾರನ್ನು ಬಡಗನ್ನೂರು ಸಮೀಪದ ಪೆರಿಗೇರಿ ಎಂಬಲ್ಲಿ ಸ್ಥಳೀಯ ಯುವಕರು ತಡೆದು ನಿಲ್ಲಿಸಿದ್ದಾಗಿ ತಿಳಿದುಬಂದಿದೆ.








