Sunday, September 13, 2026
spot_imgspot_img
spot_imgspot_img

ಮೈಸೂರು: ಡ್ರಗ್ಸ್‌ ಗೋಡೌನ್‌ ಜಪ್ತಿ; ಉತ್ತರ ಪ್ರದೇಶ ಮೂಲದ ದಂಪತಿ ವಶಕ್ಕೆ..!

- Advertisement -
- Advertisement -

ಮೈಸೂರು: ನಗರದ ಹೊರವಲಯದ ಯಾಂಡಳ್ಳಿ ಬಳಿ ಡ್ರಗ್ಸ್ ತಯಾರಿಕೆಗೆ ಸಿದ್ಧತೆ ಮಾಡಿಕೊಂಡಿದ್ದ ಗೋಡೌನ್ ಮೇಲೆ ಪೊಲೀಸರು ದಾಳಿ ನಡೆಸಿ, ಗೋಡೌನ್‌ ಜಪ್ತಿ ಮಾಡಿ, ಅದರಲ್ಲಿ ಸಂಗ್ರಹಿಸಿದ್ದ ಡ್ರಗ್ಸ್ ತಯಾರಿಕೆಗೆ ಬಳಸುವ ಭಾರೀ ಪ್ರಮಾಣದ ರಾಸಾಯನಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಉತ್ತರ ಪ್ರದೇಶ ಮೂಲದ ದಂಪತಿ ನಾಲ್ಕು ತಿಂಗಳ ಹಿಂದೆ ಎರಡು ಮನೆ ಹಾಗೂ ಮನೆ ಕೆಳ ಅಂತಸ್ತಿನಲ್ಲಿ ಗೋಡೌನ್ ಬಾಡಿಗೆ ಪಡೆದಿದ್ದರು. ಈ ಗೋಡೌನ್‌ನಲ್ಲಿ ಡ್ರಗ್ಸ್ ತಯಾರಿಕೆಗೆ ಬಳಸುವ ಕೆಮಿಕಲ್ಸ್ ಸಂಗ್ರಹಿಸಿ, ಕೃತ್ಯಕ್ಕೆ ಅನುಕೂಲವಾಗುವಂತೆ ನಿರ್ಜನ ಪ್ರದೇಶದ ಒಂಟಿ ಮನೆಯನ್ನೇ ಆಯ್ಕೆ ಮಾಡಿಕೊಂಡಿದ್ದರು.

ಗೋಡೌನ್ ನಲ್ಲಿ ಡ್ರಗ್ಸ್ ತಯಾರಿಕೆಗಾಗಿ ಭಾರಿ ಪ್ರಮಾಣದ ಕಚ್ಚಾ ಪದಾರ್ಥಗಳನನ್ನು ಬ್ಯಾರೆಲ್‌ಗಳಲ್ಲಿ ಸಂಗ್ರಹಿಸಿದ್ದರು. ಡ್ರಗ್ಸ್ ತಯಾರಿಕೆಯ ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಆರೋಪಿಗಳ ಪ್ಲ್ಯಾನ್‌ ಅನ್ನು ವಿಫಲಗೊಳಿಸಿದ್ದಾರೆ.

ದಂಪತಿ ಈ ಮನೆಗೆ ಬಂದು ಮೂರು ತಿಂಗಳು ಕಳೆದಿದ್ದರೂ ಸಹ ಸ್ಥಳೀಯರ ಜೊತೆ ಮಾತುಕತೆ ಇರಲಿಲ್ಲ. ಕೇವಲ ಇಬ್ಬರು ವಾಸ ಮಾಡುವುದಕ್ಕೆ ಎರಡು ಮನೆ ಬಾಡಿಗೆ ಪಡೆದಿದ್ದರು. ರಾತ್ರಿ ವೇಳೆಯಲ್ಲಿ ಮಾತ್ರ ಆಗಾಗ ಗೋಡೌನ್ ಬಾಗಿಲು ತೆರೆಯುತ್ತಿದ್ದರು. ಸ್ಥಳೀಯರು ಮಾತನಾಡಿಸಲು ಪ್ರಯತ್ನಿಸಿದಾಗಲೂ ಕೈ ಸನ್ನೆಯಲ್ಲೇ ಮಾತನಾಡುತ್ತಿದ್ದರು. ದೆಹಲಿ ನೋಂದಣಿಯ ಕಾರು ಬಳಕೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಪೊಲೀಸರು ದಂಪತಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!