Wednesday, July 22, 2026
spot_imgspot_img
spot_imgspot_img

ಲಂಚ ಪ್ರಕರಣ: ಗ್ರಾಮ ಲೆಕ್ಕಾಧಿಕಾರಿಗೆ 4 ವರ್ಷ ಕಾರಾಗೃಹ, 20 ಸಾವಿರ ದಂಡ ವಿಧಿಸಿದ ಕೋರ್ಟ್‌

- Advertisement -
- Advertisement -

ಕಲಬುರಗಿ : ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಗ್ರಾಮ ಲೆಕ್ಕಾಧಿಕಾರಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು 4 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 20,000 ದಂಡ ವಿಧಿಸಿದೆ.

ಪ್ರಕರಣದ ವಿವರಗಳ ಪ್ರಕಾರ, ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ ಗ್ರಾಮದ ನಿವಾಸಿ ಹಣಮಂತ ತಳವಾರ ಅವರು ತಮ್ಮ ತಂದೆಯ ಹೆಸರಿನ ಇನಾಮ ಜಮೀನಿನ ದಾಖಲೆಗಳಲ್ಲಿ ತಿದ್ದುಪಡಿ ಮಾಡಲು ಗ್ರಾಮ ಲೆಕ್ಕಾಧಿಕಾರಿ ಸೂರ್ಯಕಾಂತ ಜಮಾದಾರರನ್ನು ಸಂಪರ್ಕಿಸಿದ್ದರು. ಈ ವೇಳೆ ಆರೋಪಿಯು 15,000 ಲಂಚದ ಬೇಡಿಕೆ ಇಟ್ಟಿದ್ದು, ಮೊದಲು 6,000 ಸ್ವೀಕರಿಸಿದ್ದಾರೆ. ನಂತರ ಉಳಿದ 9,000 ಸ್ವೀಕರಿಸುವ ವೇಳೆ ಜೇವರ್ಗಿಯ ಮಿನಿ ವಿಧಾನಸೌಧದ ಟೀ ಸ್ಟಾಲ್‌ನಲ್ಲಿ ಲೋಕಾಯುಕ್ತ (ಎ.ಸಿ.ಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದರು.ಈ ಸಂಬಂಧ 2017ರಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ, ಪಿ.ಸಿ.ಕಾಯ್ದೆಯ ಕಲಂ 7 ಹಾಗೂ 13(1)(ಡಿ) ಅಡಿಯಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀನಾರಾಯಣ ಅವರು, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಿ, ಆದೇಶಿಸಿದ್ದಾರೆ.ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಅಶೋಕ್‌ ಚಾಂದಕವಠೆ ಅವರು ವಾದ ಮಂಡಿಸಿದ್ದರು. ಲೋಕಾಯುಕ್ತ ಪೊಲೀಸರ ಸಿಬ್ಬಂದಿ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪ್ರಕರಣದ ವಿಚಾರಣೆಗೆ ಸಹಕರಿಸಿದರು.


- Advertisement -

Related news

error: Content is protected !!