ವಿಟ್ಲ: ಸುಮಾರು 34 ವರ್ಷಗಳ ಹಿಂದಿನ ಅಕ್ರಮ ಪೆಟ್ರೋಲ್ ಸಾಗಾಟ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

1992ರ ಅಕ್ಟೋಬರ್ 14ರಂದು ಕಾರೊಂದರಲ್ಲಿ ಅಕ್ರಮವಾಗಿ ಪೆಟ್ರೋಲ್ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ನಿವಾಸಿಗಳಾದ ಇಬ್ರಾಹಿಂ ಹಾಗೂ ಸಿದ್ದೀಕ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರಮ ಸಂಖ್ಯೆ 124/1992ರಡಿ ಪೆಟ್ರೋಲಿಯಂ ಕಾಯ್ದೆಯ ಕಲಂ 3 ಮತ್ತು 23ರಡಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ವಿಚಾರಣೆಗೆ ಹಾಜರಾಗದೆ ಆರೋಪಿಗಳ ಪೈಕಿ ಸಿದ್ದೀಕ್ ಎಂಬಾತ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಈತನ ಪತ್ತೆಗೆ ವಿಟ್ಲ ಪೊಲೀಸರು ನಿರಂತರ ಶೋಧ ಕಾರ್ಯ ನಡೆಸುತ್ತಿದ್ದರು.
ಇದೀಗ ಮೇ 11ರಂದು ರಾತ್ರಿ ಕನ್ಯಾನ ಗ್ರಾಮದ ಕಬ್ಬಿನ ಮೂಲೆ ಪ್ರದೇಶದಲ್ಲಿ ವಿಟ್ಲ ಠಾಣೆಯ ಪ್ರೊಬೇಶನರ್ ಪಿಎಸ್ಐ ಸಿದ್ದಪ್ಪ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. ಬಂಧನ ಕಾರ್ಯಾಚರಣೆಯಲ್ಲಿ ಎಎಸ್ಐ ಜಯರಾಮ್, ಪಿಸಿ ಗೋಪಾಲ್, ಯಂಕಪ್ಪ ಹಾಗೂ ಶ್ರೀಶೈಲ್ ಜೋರಾಪುರ ಭಾಗವಹಿಸಿದ್ದರು. ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.








