Tuesday, June 9, 2026
spot_imgspot_img
spot_imgspot_img

ಧರ್ಮಸ್ಥಳ: ನೂರಾರು ಶವ ಹೂತಿಟ್ಟ ಪ್ರಕರಣ; 13ನೇ ಗುರುತಿನಲ್ಲಿ ಇಂದು GPR ಬಳಸಿ ಶೋಧ

- Advertisement -
- Advertisement -

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹಗಳನ್ನು ಹೂತಿಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ(ಎಸ್‌ಐಟಿ) ಕಳೆದ ಎರಡು ವಾರಗಳಿಂದ ನಡೆಸುತ್ತಿರುವ ತನಿಖೆಯ ಭಾಗವಾಗಿ ದೂರುದಾರ ಗುರುತಿಸಿರುವ ಪಾಯಿಂಟ್ ನಂಬರ್ 13ರಲ್ಲಿ ಇಂದು ಶೋಧ ಕಾರ್ಯ ನಡೆಯಲಿದೆ.

ತನಿಖೆಯ ಆರಂಭದಲ್ಲಿ ದೂರುದಾರ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತ ಒಟ್ಟು 13 ಸ್ಥಳಗಳನ್ನು ಗುರುತಿಸಿದ್ದ. ಸ್ಥಳ ಗುರುತಿಸಿದ ಮರುದಿನದಿಂದಲೇ ಎಸ್‌ಐಟಿ ಅಧಿಕಾರಿಗಳು ಮಣ್ಣು ಅಗೆತ ಆರಂಭಿಸಿ ಶೋಧ ನಡೆಸತೊಡಗಿದ್ದರು.

ಪೈಕಿ ಪಾಯಿಂಟ್ ನಂಬರ್ 6 ಲ್ಲಿ ಮಾನವ ಅವಶೇಷ ಪತ್ತೆಯಾಗಿರುವುದಾಗಿ ವರದಿಯಾಗಿತ್ತು. ಗುರುತು ಸಂಖ್ಯೆ 10ರಲ್ಲಿ ಶೋಧ ನಡೆಸಿದ ಎಸ್‌ಐಟಿ ತಂಡ ಬಳಿಕ ಬಂಗ್ಲಗುಡ್ಡೆಯಲ್ಲಿ ಎರಡು ಹೊಸ ಜಾಗಗಳಲ್ಲಿ ಶೋಧ ನಡೆಸಿರುವುದಾಗಿಯೂ ವರದಿಯಾಗಿತ್ತು. ಇಲ್ಲಿಯೂ ಕೆಲವು ಮಾನವ ಅವಶೇಷಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿತ್ತು. ಗುರುತು ಸಂಖ್ಯೆ 11 ಮತ್ತು 12ರಲ್ಲಿ ಶೋಧ ನಡೆಸಿದ ಎಸ್‌ಐಟಿ ತಂಡ ಬಳಿಕ ಅಚ್ಚರಿಯ ಬೆಳವಣಿಗೆಯಲ್ಲಿ ಗುರುತು ಸಂಖ್ಯೆ 13ನ್ನು ಕೈಬಿಟ್ಟು ನೇರವಾಗಿ ಕಲ್ಲೇರಿ ಸಮೀಪದ ಬೋಳಿಯಾರ್ನ ಗುಡ್ಡದಲ್ಲಿ ಶೋಧ ನಡೆಸಿತ್ತು. ಆದರೆ ಅಲ್ಲಿ ಯಾವುದೇ ಮಾನವ ಅವಶೇಷಗಳು ಪತ್ತೆಯಾಗಿಲ್ಲ ಎನ್ನಲಾಗುತ್ತಿದ್ದರೂ ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

ಆ ಬಳಿಕದ ಬೆಳವಣಿಗೆಯಲ್ಲಿ ದೂರುದಾರನೊಂದಿಗೆ ಎಸ್‌ಐಟಿ ನೇರವಾಗಿ ಪ್ರವೇಶ ಮಾಡಿದ್ದು, ಧರ್ಮಸ್ಥಳ ದೇವಸ್ಥಾನದ ದ್ವಾರದ ಮೂಲಕ ಬಾಹುಬಲಿ ಬೆಟ್ಟದ ಸಮೀಪಕ್ಕೆ ಈ ಬೆಳವಣಿಗೆಯೂ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಬಾಹುಬಲಿ ಬೆಟ್ಟ ಸಮೀಪದ ತಿರುವೊಂದರಲ್ಲಿ ದೂರುದಾರನ ಸೂಚನೆ ಮೇರೆಗೆ ಜೆಸಿಬಿ ಬಳಸಿ ಶೋಧ ನಡೆಸಿದ ಎಸ್‌ಐಟಿಗೆ ಯಾವುದೇ ಮಾನವ ಅವಶೇಷ ಸಿಕ್ಕಿರಲಿಲ್ಲ. ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿದ್ದ ಸುಜಾತಾ ಭಟ್ ವಕೀಲ ಮಂಜುನಾಥ್, ಅಲ್ಲಿ ಕಟ್ಟಡ ಅವಶೇಷಗಳನ್ನು ರಾಶಿ ಹಾಕುವ ಮೂಲಕ ಸಾಕ್ಷ್ಯನಾಶದ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದರು.

ಬಾಹುಬಲಿ ಬೆಟ್ಟದಲ್ಲಿ ಶೋಧ ನಡೆಸುವ ಮೂಲಕ ಎಸ್‌ಐಟಿ ಒಟ್ಟು 15 ಗುರುತುಗಳಲ್ಲಿ ಶೋಧ ಕಾರ್ಯ ಮುಗಿಸಿತ್ತು. ಇನ್ನು ಕೌತುಕದ ಗೂಡಾಗಿದ್ದ 13ನೇ ಗುರುತಿನಲ್ಲಿ ಮಂಗಳವಾರ ಎಸ್‌ಐಟಿ ಜಿಪಿಆರ್ ಅರ್ಥಾತ್ ಗೌಂಡ್ ಪೆನೆಟ್ರೇಟಿಂಗ್ ರಾಡಾರ್ ಬಳಸಿ ಶೋಧ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರವೇ ಅಲ್ಲಿ ಪ್ರಾಯೋಗಿಕವಾಗಿ ಈ ಡೋನ್ ಆಧಾರಿತ ಜಿಪಿಆರ್ ಅನ್ನು ಪ್ರಾಯೋಗಿಕವಾಗಿ ಪರಿಶೀಲನೆ ನಡೆಸಲಾಗಿತ್ತು. ಈ ಪರಿಶೀಲನೆ ಧನಾತ್ಮಕ ಫಲಿತಾಂಶ ನೀಡಿದ್ದು, ಮಂಗಳವಾರ ಈ ತಂತ್ರಜ್ಞಾನ ಬಳಸಿ ಶೋಧ ನಡೆಸಲಾಗುವುದು ಎಂದು ತಿಳಿದು ಬಂದಿದೆ.

ಭಾರೀ ಕುತೂಹಲ ಮೂಡಿಸಿದ್ದ ಪಾಯಿಂಟ್ ನಂಬರ್ 13ರಲ್ಲಿ ದೂರುದಾರ ಒಂದಕ್ಕಿಂತ ಹೆಚ್ಚು ಮೃತ ದೇಹಗಳನ್ನು ಹೂತು ಹಾಕಿರುವುದಾಗಿ ಆರೋಪಿಸಿದ್ದ. ಅಲ್ಲದೇ ದೂರುದಾರ ಈ ವರೆಗೆ ಗುರುತಿಸಿದ್ದ ಹೆಚ್ಚಿನ ಸ್ಥಳಗಳಲ್ಲಿ ಯಾವುದೇ ಮಾನವ ಅವಶೇಷಗಳು ಪತ್ತೆಯಾಗಿರಲಿಲ್ಲ. ಇಲ್ಲೂ ರಾಡಾರ್ ಬಳಸಿ ಶೋಧ ಕಾರ್ಯ ನಡೆಸಿದಾಗ ಕುರುಹು ಪತ್ತೆಯಾದರೆ ಮಾತ್ರ ಉತ್ಪನನ ನಡೆಸುವ ಉದ್ದೇಶದಿಂದ ಈ ಪ್ರಯತ್ನಕ್ಕೆ ಎಸ್‌ಐಟಿ ಇಳಿದಿದೆ ಎನ್ನಲಾಗುತ್ತಿದೆ. ಅಲ್ಲದೇ ಉತ್ಪನನಕ್ಕೆ ರಾಡಾರ್ ಬಳಸುವಂತೆಯೂ ಸುಜಾತಾ ಭಟ್ ಪರ ವಕೀಲರು ಆಗ್ರಹಿಸಿದ್ದರು. 13ನೇ ಗುರುತು ಇರುವ ಸ್ಥಳವು ನೇತ್ರಾವತಿ ಸ್ನಾನ ಘಟ್ಟದ ಬಳಿ ಇರುವ ಕಿಂಡಿ ಅಣೆಕಟ್ಟಿನ ಸಮೀಪ ಇದ್ದು, ಆ ಪ್ರದೇಶದಲ್ಲಿ ಜೆಸಿಬಿ ಬಳಸಿ ಅಗೆಯುತ್ತಾ ಹೋದರೆ ಅದು ಅಣೆಕಟ್ಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದೆಂದು ಅಂದಾಜಿಸಲಾಗಿದೆ. ಈ ಎಲ್ಲ ಕಾರಣಗಳಿಂದಾಗಿ 13ನೇ ಪಾಯಿಂಟ್ ನಲ್ಲಿ ಜಿಪಿಆ‌ರ್ ಅರ್ಥಾತ್ ಗೌಂಡ್ ಪೆನೆಟ್ರೇಟಿಂಗ್ ರಾಡಾರ್ ಅನ್ನು ಬಳಸಲು ಎಸ್‌ಐಟಿ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!