






ಬೆಂಗಳೂರು: 108 ಅಂಬ್ಯುಲೆನ್ಸ್ ಗಳ ನಿರ್ವಹಣೆಯನ್ನ ಖಾಸಗಿ ಏಜನ್ಸಿಗಳ ಹಿಡಿತದಿಂದ ತಪ್ಪಿಸಿ ರಾಜ್ಯ ಸರ್ಕಾರ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಚಿವರು 108 ಅಂಬ್ಯುಲೆನ್ಸ್ ಗಳನ್ನು ಇಲ್ಲಿಯವರೆಗೆ ಖಾಸಗಿ ಏಜೆನ್ಸಿಗಳು ನಿರ್ವಹಿಸುತ್ತಿದ್ದವು. ಈ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಹೀಗಾಗಿ ಇನ್ಮುಂದೆ ರಾಜ್ಯ ಸರ್ಕಾರವೇ 108 ಅಂಬ್ಯುಲೆನ್ಸ್ ಗಳ ನಿರ್ವಹಣೆಗೆ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದ್ದು, ಈಗಾಗಲೇ ಚಾಮರಾಜ ನಗರ ಜಿಲ್ಲೆಯಲ್ಲಿ ಪ್ರಾಯೋಗಿಕ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಲಾಗಿದೆ ಎಂದರು. 108 ಅಂಬ್ಯುಲೆನ್ಸ್ ಗಳ ಸೇವೆ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಬಹು ಮುಖ್ಯವಾದದ್ದು. ಖಾಸಗಿ ಏಜನ್ಸಿಯಿಂದ ಇದರ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿರಲಿಲ್ಲ. ಸರ್ಕಾರದಿಂದ ಏಜೆನ್ಸಿಗೆ ಹಣ ಪಾವತಿಯಾದರೂ, ಅಂಬ್ಯುಲೆನ್ಸ್ ಸಿಬ್ಬಂದಿಗಳಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಯಾಗುತ್ತಿರಲಿಲ್ಲ. ಸರ್ಕಾರ ಹಲವು ಬಾರಿ ಮದ್ಯಪ್ರವೇಶಿಸಿ ಅಂಬ್ಯುಲೆನ್ಸ್ ಡ್ರೈವರ್ ಗಳ ಸಮಸ್ಯೆಯನ್ನ ಬಗೆಹರಿಸಬೇಕಾಗಿತ್ತು. ಸರ್ಕಾರವೇ ನಿರ್ವಹಣೆ ಮಾಡುವುದರಿಂದ ಇನ್ಮುಂದೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.








