




ಶಿವಮೊಗ್ಗ: ಸಹೋದರರ ನಡುವೆ ಜಮೀನು ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೋರ್ವ ತನ್ನ ಚಿಕ್ಕಪ್ಪನಿಗೆ ಚಾಕು ಇರಿದ ಘಟನೆ ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ನಡೆದಿದೆ.
ಪುರದಾಳು ಗ್ರಾಮದ ನಿವಾಸಿ ಶ್ರೀನಿವಾಸ್(52) ಚಾಕು ಇರಿತಕ್ಕೊಳಗಾದ ವ್ಯಕ್ತಿ. ರಾಜಪ್ಪ ಅವರ ಪುತ್ರ ಮಂಜುನಾಥ್ ಚಾಕು ಇರಿದ ಆರೋಪಿ.
ಪುರದಾಳು ಗ್ರಾಮದ ರಾಜಪ್ಪ ಹಾಗೂ ಶ್ರೀನಿವಾಸ್ ಸಹೋದರರಾಗಿದ್ದು, ಜಮೀನಿನ ಗಡಿ ಹಾಗೂ ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.
ಶ್ರೀನಿವಾಸ್ ಹಾಗೂ ಅವರ ಪತ್ನಿ ಅಡಿಕೆ ತೋಟಕ್ಕೆ ನೀರು ಹಾಯಿಸುತ್ತಿದ್ದ ವೇಳೆ ರಾಜಪ್ಪ ಹಾಗೂ ಅವರ ಪತ್ನಿ ಯಾಕೆ ನೀರು ಹಾಯಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ರಾಜಪ್ಪ ಹಾಗೂ ಅವರ ಪತ್ನಿ ಶ್ರೀನಿವಾಸ್ ದಂಪತಿ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಸ್ಥಳಕ್ಕೆ ಬಂದ ರಾಜಪ್ಪನ ಪುತ್ರ ಮಂಜುನಾಥ್ ಕಾರಿನಿಂದ ಇಳಿದು ಚಾಕು ತೆಗೆದುಕೊಂಡು ತನ್ನ ಚಿಕ್ಕಪ್ಪ ಶ್ರೀನಿವಾಸ್‌ಗೆ ಏಕಾಏಕಿ ಹಲವು ಬಾರಿ ಚಾಕು ಇರಿದಿದ್ದು, ಶ್ರೀನಿವಾಸ್ ಅವರ ಎದೆ, ಪಕ್ಕೆಲುಬು ಹಾಗೂ ತೊಡೆಯ ಭಾಗಕ್ಕೆ ಚಾಕು ಇರಿತವಾಗಿದೆ. ಗಲಾಟೆ ಬಿಡಿಸಲು ಹೋದ ಶ್ರೀನಿವಾಸ್ ಅವರ ಪತ್ನಿ ಶಶಿಕಲಾ ಮೇಲೂ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಗಾಯಗೊಂಡ ಶ್ರೀನಿವಾಸ್ ಹಾಗೂ ಅವರ ಪತ್ನಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿರುವ ಶ್ರೀನಿವಾಸ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣ ಸಂಬಂಧ ರಾಜಪ್ಪ ಹಾಗೂ ಅವರ ಪುತ್ರ ಮಂಜುನಾಥ್ ಅವರನ್ನು ತುಂಗಾನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದು, ಘಟನೆ ಕುರಿತು ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.








