Tuesday, July 21, 2026
spot_imgspot_img
spot_imgspot_img

ಮನೆಕೆಲಸದ ದಂಪತಿಯ ಕ್ರೌರ್ಯ: ಐದು ವರ್ಷ ಕೂಡಿ ಹಾಕಿ ಆಹಾರ ನಿರಾಕರಣೆ – ತಂದೆ ಸಾವು, ಮಗಳು ಗಂಭೀರ

- Advertisement -
- Advertisement -

ಲಕ್ನೋ/ಮಹೋಬಾ: ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಮಾನವೀಯತೆಯನ್ನು ಕಲುಷಿತಗೊಳಿಸುವ ಭಯಾನಕ ಘಟನೆ ಬೆಳಕಿಗೆ ಬಂದಿದೆ. ನಿವೃತ್ತ ರೈಲ್ವೆ ಉದ್ಯೋಗಿಯೊಬ್ಬರು ಹಸಿವಿನಿಂದ ಸಾವನ್ನಪ್ಪಿದ್ದು, ಅವರ ಮಾನಸಿಕ ಅಸ್ವಸ್ಥ ಪುತ್ರಿ ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಇಬ್ಬರನ್ನು ಐದು ವರ್ಷಗಳ ಕಾಲ ಸ್ವಂತ ಮನೆಯಲ್ಲೇ ಕೂಡಿ ಹಾಕಿ, ಆಹಾರ ಹಾಗೂ ಚಿಕಿತ್ಸೆ ನೀಡದೆ ಕ್ರೌರ್ಯ ಎಸಗಿರುವ ಆರೋಪ ಮನೆಕೆಲಸದ ದಂಪತಿಯ ಮೇಲೆ ಹೊರಿಸಲಾಗಿದೆ.


ಮೃತ ವ್ಯಕ್ತಿಯನ್ನು ನಿವೃತ್ತ ರೈಲ್ವೆ ಉದ್ಯೋಗಿ ಓಂ ಪ್ರಕಾಶ್ ಸಿಂಗ್ ರಾಥೋಡ್ (70) ಎಂದು ಗುರುತಿಸಲಾಗಿದೆ. ಸೋಮವಾರ ಅವರು ಮೃತಪಟ್ಟಿದ್ದು, ವಿಷಯ ತಿಳಿದ ಕುಟುಂಬಸ್ಥರು ಮನೆಗೆ ತೆರಳಿದಾಗ ಅಚ್ಚರಿಯ ಸಂಗತಿ ಬಹಿರಂಗವಾಗಿದೆ. ಓಂ ಪ್ರಕಾಶ್ ಹಾಗೂ ಅವರ ಪುತ್ರಿ ರಶ್ಮಿ ಅವರನ್ನು ಮನೆಕೆಲಸಕ್ಕೆ ನೇಮಿಸಿಕೊಂಡಿದ್ದ ದಂಪತಿ ನೆಲ ಮಹಡಿಯ ಕೋಣೆಯಲ್ಲಿ ಬಂಧನದಲ್ಲಿಟ್ಟಿದ್ದು, ತಾವು ಮೇಲ್ಮಹಡಿಯಲ್ಲಿ ಸುಖವಾಗಿ ವಾಸಿಸುತ್ತಿದ್ದರೆಂದು ಆರೋಪಿಸಲಾಗಿದೆ.


ಆಸ್ತಿಯ ಲಾಲಸೆಯಿಂದ ಕ್ರೌರ್ಯ?
ಈ ಕುರಿತು ಮಾತನಾಡಿದ ಓಂ ಪ್ರಕಾಶ್ ಅವರ ಸಹೋದರ ಅಮರ್ ಸಿಂಗ್ ರಾಥೋಡ್, “ನನ್ನ ಸಹೋದರ 2015ರಲ್ಲಿ ನಿವೃತ್ತರಾಗಿದ್ದು, 2016ರಲ್ಲಿ ಪತ್ನಿಯ ಮರಣದ ಬಳಿಕ ಮಾನಸಿಕ ಅಸ್ವಸ್ಥ ಪುತ್ರಿ ರಶ್ಮಿಯೊಂದಿಗೆ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದರು. ಅವರಿಗೆ ಅಡುಗೆ ಮಾಡಲು ಸಾಧ್ಯವಾಗದ ಕಾರಣ ರಾಮ್ ಪ್ರಕಾಶ್ ಕುಶ್ವಾಹ ಮತ್ತು ಪತ್ನಿ ರಾಮ್ ದೇವಿ ಅವರನ್ನು ಮನೆಕೆಲಸಕ್ಕೆ ನೇಮಿಸಿಕೊಂಡಿದ್ದರು. ರಶ್ಮಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನೂ ಅವರಿಗೆ ನೀಡಲಾಗಿತ್ತು. ಆದರೆ ಕ್ರಮೇಣ ಅವರು ಮನೆ ವಶಪಡಿಸಿಕೊಂಡು, ನನ್ನ ಸಹೋದರ ಮತ್ತು ಮಗಳನ್ನು ನೆಲ ಮಹಡಿಗೆ ಸೀಮಿತಗೊಳಿಸಿದರು” ಎಂದು ಆರೋಪಿಸಿದರು.


ಆಹಾರ, ಚಿಕಿತ್ಸೆ ನಿರಾಕರಣೆ
“ಓಂ ಪ್ರಕಾಶ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟರೂ ಆಸ್ಪತ್ರೆಗೂ ಕರೆದೊಯ್ಯಲಿಲ್ಲ. ಒಂದೇ ಬಾರಿ ಮಾತ್ರ ಆಸ್ಪತ್ರೆಗೆ ಕರೆದೊಯ್ದಿದ್ದೇವೆ ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ. ಸರಿಯಾದ ಆಹಾರ ನೀಡಿಲ್ಲ, ಆರೈಕೆ ಮಾಡಿಲ್ಲ. ಕುಟುಂಬದವರು ಭೇಟಿಗೆ ಬಂದಾಗಲೆಲ್ಲಾ ‘ಅವರಿಗೆ ಯಾರನ್ನೂ ನೋಡಲು ಇಷ್ಟವಿಲ್ಲ’ ಎಂದು ನೆಪ ಹೇಳಿ ತಿರಸ್ಕರಿಸುತ್ತಿದ್ದರು. ದಿನಕ್ಕೆ ಎರಡು ಬಾರಿ ಚಪಾತಿ ಕೊಡುತ್ತಿದ್ದೆವು ಎನ್ನುವುದು ಸುಳ್ಳು. ಒಂದು ಚಪಾತಿಯನ್ನಾದರೂ ಸರಿಯಾಗಿ ನೀಡಿದ್ದರೆ ಇಂತಹ ಸ್ಥಿತಿ ಬರಲಿಲ್ಲ” ಎಂದು ಅಮರ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.


ಕಣ್ಣು ತುಂಬಿಸುವ ದೃಶ್ಯ
ಮನೆಯೊಳಗೆ ಕಂಡ ದೃಶ್ಯವು ಕುಟುಂಬಸ್ಥರನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಓಂ ಪ್ರಕಾಶ್ ಅವರ ಮೃತದೇಹ ತೀವ್ರವಾಗಿ ಕೃಶಗೊಂಡ ಸ್ಥಿತಿಯಲ್ಲಿದ್ದರೆ, ಪುತ್ರಿ ರಶ್ಮಿ ಕತ್ತಲೆಯ ಕೋಣೆಯಲ್ಲಿ ಬೆತ್ತಲೆಯಾಗಿ, ಅಸ್ಥಿಪಂಜರದಂತಿರುವ ದೇಹದೊಂದಿಗೆ ಇನ್ನೂ ಉಸಿರಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
“ರಶ್ಮಿ ಹಸಿವಿನಿಂದ ಬಳಲಿ 80 ವರ್ಷದ ವೃದ್ಧೆಯಂತೆ ಕಾಣುತ್ತಿದ್ದಳು. ದೇಹದ ಮೇಲೆ ಮಾಂಸವೇ ಇರಲಿಲ್ಲ. ಜೀವಂತ ಅಸ್ಥಿಪಂಜರದಂತಿದ್ದ ದೃಶ್ಯ ನಮ್ಮನ್ನು ನಡುಗಿಸಿತು” ಎಂದು ಕುಟುಂಬದ ಮತ್ತೊಬ್ಬ ಸದಸ್ಯರು ತಿಳಿಸಿದ್ದಾರೆ.

ಈ ಭೀಕರ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಆಸ್ತಿ ದುರಾಸೆಯಿಂದ ಈ ಕೃತ್ಯ ಎಸಗಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

- Advertisement -

Related news

error: Content is protected !!