


ಬಂಟ್ವಾಳ : ಶಾಮಿಯಾನ ಹಾಕುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಓರ್ವ ಯುವಕ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡ ಘಟನೆ ಕಡೇಶಿವಾಲಯದ ಕೆಮ್ಮನ್ ಕಾಡಬೆಟ್ಟುವಿನಲ್ಲಿ ನಡೆದಿದೆ.
ಕಲ್ಲಡ್ಕದ ಶಾಮಿಯಾನ ಸಂಸ್ಥೆಯ 5 ನೌಕರರು ಕಾರ್ಯಕ್ರಮವೊಂದರ ಸಲುವಾಗಿ ಚಪ್ಪರ ಹಾಕಲು ತೆರಳಿದ್ದರು. ಚಪ್ಪರ ಹಾಕುವ ವೇಳೆ ಉದ್ದದ ಕಬ್ಬಿಣದ ಟ್ರೆಸ್ ಪಕ್ಕದಲ್ಲಿ ಹಾದು ಹೋದ ಹೈ ಟೆನ್ಸನ್ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. ಈ ವೇಳೆ ತೀವ್ರ ಶಾಕ್ ಗೆ ಒಳಗಾದ ಕಾರ್ಮಿಕ ಕುಂದನ್ ಕುಮಾರ್ (18) ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಇತರರಿಗೆ ಗಾಯವಾಗಿದ್ದು, ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಕುಂದನ್ ಬಿಹಾರ ಮೂಲದವನಾಗಿದ್ದಾನೆ. ಗಾಯಗೊಂಡವರ ಪೈಕಿ ಬಬ್ಲೂ ಮತ್ತು ಪ್ರದೀಪ್ ಜಾರ್ಖಂಡ್ ಮೂಲದವರಾಗಿದ್ದರೆ, ಪ್ರದೀಪ್ ಪಶ್ಚಿಮ ಬಂಗಾಳದವರಾಗಿದ್ದಾರೆ.ಸ್ಥಳೀಯ ಕಾರ್ಮಿಕ ಪ್ರಸನ್ನ ಅಪಾಯದಿಂದ ಪಾರಾಗಿದ್ದಾರೆ. ಉಳಿದಂತೆ ಮೂವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.








