ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಂಕಷ್ಟ ಎದುರಾಗಿದೆ. ತೆರಿಗೆ ವಂಚನೆ ಹಾಗೂ ಅವ್ಯವಹಾರ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಗಾಂಧಿ ಕುಟುಂಬದ 3 ಟ್ರಸ್ಟ್ ಗಳ ತನಿಖೆಗೆ ಕೇಂದ್ರ ಗೃಹ ಇಲಾಖೆ ಆದೇಶ ಮಾಡಿದೆ. ಹೀಗಾಗಿ 3 ಟ್ರಸ್ಟ್ ಗಳ ತನಿಖೆಗೆ ಅಂತರ್ ಸಚಿವಾಲಯದ ಕಮಿಟಿಯನ್ನು ನೇಮಕ ಮಾಡಿದೆ.
ಈ ತನಿಖಾ ಕಮಿಟಿಯಲ್ಲಿ ಸಿಬಿಐ ನಿರ್ದೇಶಕರು, ಜಾರಿ ನಿರ್ದೇಶನದ ನಿರ್ದೇಶಕರು ಕೂಡ ಇರಲಿದ್ದಾರೆ ಎಂದು ತಿಳಿದುಬಂದಿದೆ. ರಾಜೀವ್ ಗಾಂಧಿ ಪೌಂಡೇಶನ್, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಹಾಗೂ ಇಂದಿರಾಗಾಂಧಿ ಮೆಮೊರಿಯಲ್ ಟ್ರಸ್ಟ್ ವಿರುದ್ಧ ಅವ್ಯವಹಾರ ಆರೋಪ ಕೇಳಿಬಂದಿದೆ. ಹೀಗಾಗಿ ತನಿಖೆ ನಡೆಯಲಿದೆ.
3 ಟ್ರಸ್ಟ್ ವಿರುದ್ಧವಿರುವ ಆರೋಪವೇನು..?
ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ, ಈ ಟ್ರಸ್ಟ್ ಗಳ ವಿರುದ್ಧ ಅವ್ಯವಹಾರ ಆರೋಪ ಮಾಡಿದ್ದರು. ಪಿಎಂ ರಿಲೀಫ್ ಫಂಡ್ ನಿಂದ ರಾಜೀವ್ ಗಾಂಧಿ ಪೌಂಡೇಶನ್ ಗೆ ಹಣ ನೀಡಲಾಗಿತ್ತು. ಆದ್ರೆ ಇದು ಕುಟುಂಬದ ಹಣದ ಹಸಿವಿನಿಂದ ಇಡೀ ದೇಶಕ್ಕೆ ಮಾರಕವಾಯಿತು ಎಂದು ದೂರಿದ್ದರು.ಇದಲ್ಲದೇ, ತಮ್ಮ ಆರೋಪಕ್ಕೆ ಸಾಕ್ಷಿಯಾಗಿ ದಾಖಲೆಗಳನ್ನು ಕೂಡ ಬಿಡುಗಡೆ ಮಾಡಿದ್ದರು.
ಇನ್ನೊಂದುಕಡೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಕೂಡ ಗಾಂಧಿ ಕುಟುಂಬದ ಟ್ರಸ್ಟ್ ವಿರುದ್ಧ ಆರೋಪ ಮಾಡಿದ್ದರು. ಚೀನಾದಿಂದ ರಾಜೀವ್ ಗಾಂಧಿ ಪೌಂಡೇಶನ್ ಗೆ ಹಣ ನೀಡಲಾಗಿತ್ತು ಎಂದಿದ್ದರು. ಇದಲ್ಲದೇ ಕೆಲ ಮಾಧ್ಯಮಗಳು ಕೂಡ ತನಿಖಾ ವರದಿ ಬಿತ್ತರಿಸಿದ್ದವು. ಈ ಹಿನ್ನಲೆಯಲ್ಲಿ ಕೇಂದ್ರ ಗೃಹ ಇಲಾಖೆ ತನಿಖೆಗೆ ಆದೇಶಿಸಿದೆ ಎಂದು ತಿಳಿದುಬಂದಿದೆ.