


ಬೆಂಗಳೂರು: ಥಣಿಸಂದ್ರದ ಗ್ಯಾರೇಜ್ ಒಂದರಲ್ಲಿ ಅಗ್ನಿಅವಘಡ ಸಂಭವಿಸಿ ಸುಮಾರು 20ಕ್ಕೂ ಹೆಚ್ಚು ಕಾರುಗಳು ಹಾಗೂ 8 ಆಟೋಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಥಣಿಸಂದ್ರ ಮುಖ್ಯರಸ್ತೆಯ ಭಾರತಿಯ ಸಿಟಿ ಬಳಿ ಇರುವ ಗ್ಯಾರೇಜ್ನಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಅಗ್ನಿ ಅವಘಡದಲ್ಲಿ ಸಣ್ಣಪುಟ್ಟ ರಿಪೇರಿಗೆ ತಂದಿದ್ದ 20ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿವೆ. ಜಾಗ್ವಾರ್, ರೇಂಜ್ ರೋವರ್ ಕಾರುಗಳಿಗೂ ಹಾನಿಯಾಗಿದೆ.
ಗ್ಯಾರೇಜ್ನಿಂದ ಪಕ್ಕದ ಶೆಡ್ಗೂ ಬೆಂಕಿ ತಗುಲಿದ್ದು, ಅಲ್ಲಿ ನಿಲ್ಲಿಸಿದ್ದ ಸುಮಾರು 8 ಆಟೋಗಳು ಅಗ್ನಿಗೆ ಆಹುತಿಯಾಗಿರುವುದಲ್ಲದೇ ಕಾರು ಗ್ಯಾರೇಜ್ ಸಮೀಪದ ಯುಪಿವಿಸಿ ಕಿಟಕಿ ಫ್ಯಾಕ್ಟರಿಗೂ ಬೆಂಕಿ ತಗುಲಿದೆ. ಇದರಿಂದ ಫ್ಯಾಕ್ಟರಿಯಲ್ಲಿದ್ದ 2 ಲಕ್ಷ ರೂ. ಮೌಲ್ಯದ ಗ್ರಾಹಕರ ಕಿಟಕಿ ವಸ್ತುಗಳು, ಹಾಗೂ 4 ಲಕ್ಷ ರೂ. ಮೌಲ್ಯದ ಫ್ಯಾಕ್ಟರಿ ಯಂತ್ರಕ್ಕೆ ಹಾನಿಯಾಗಿದೆ. ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ವರದಿಯಿಂದ ತಿಳಿದುಬಂದಿದೆ.








