




ಹಾಸನ: ಹಾಸನ ನಗರದ ಕೆ.ಆರ್.ಪುರಂನಲ್ಲಿರುವ ಶಕ್ತಿ ಸದನ ಕೇಂದ್ರದಿಂದ ಇಬ್ಬರು ಬಾಂಗ್ಲಾದೇಶದ ಮಹಿಳೆಯರು ಪರಾರಿಯಾಗಿರುವ ಘಟನೆ ನಡೆದಿದೆ. ಪರಾರಿಯಾದ ಮಹಿಳೆಯರಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಪರಾರಿಯಾದವರನ್ನು ಸೀಲಾಶೇಖ್ (34) ಹಾಗೂ ಸ್ವೀಟಿ ಮೊಂಡಾಲ್ (27) ಎಂದು ಗುರುತಿಸಲಾಗಿದ್ದು, ವೇಶ್ಯಾವಾಟಿಕೆ ಪ್ರಕರಣದ ಸಂಬಂಧ ಹಾಸನ ಮಹಿಳಾ ಪೊಲೀಸ್ ಠಾಣೆ ಪೊಲೀಸರು ಇವರನ್ನು ವಶಕ್ಕೆ ಪಡೆದು ಕಳೆದ ನಾಲ್ಕು ತಿಂಗಳಿನಿಂದ ಶಕ್ತಿ ಸದನ ಕೇಂದ್ರದಲ್ಲಿ ಇರಿಸಿದ್ದರು.
ಇವರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದರು. ಮೇ 5ರಂದು ರಾತ್ರಿ ಸುಮಾರು 8:50ರ ವೇಳೆಗೆ ಇಬ್ಬರು ಮಹಿಳೆಯರು ಊಟ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕೊಠಡಿಯಿಂದ ಹೊರಬಂದು ಕೇಂದ್ರದ ಮುಂಭಾಗದ ಗೇಟ್ ಮೇಲಿಂದ ಹಾರಿ ಪರಾರಿಯಾಗಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಪೊಲೀಸರು ಮಹಿಳೆಯರಿಗಾಗಿ ಎಲ್ಲೆಡೆ ಹುಡುಕಾಟ ಆರಂಭಿಸಿದ್ದಾರೆ. ಈ ಸಂಬಂಧ ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.








