




ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿರುವ ನಡುವೆಯೇ ಅಮೆರಿಕ ಸೇನೆಗೆ ಸೇರಿದ ಅಪಾಚೆ ಗನ್‌ಶಿಪ್(AH-64 Apache) ಹೆಲಿಕಾಪ್ಟರ್ ಹಾರ್ಮುಜ್ ಜಲಸಂಧಿ ಸಮೀಪ ಪತನಗೊಂಡಿದೆ.
ಆದರೆ ಹೆಲಿಕಾಪ್ಟರ್‌ನಲ್ಲಿದ್ದ ಇಬ್ಬರು ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಈ ಬಗ್ಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಬ್ಬರೂ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ಅವರ ಆರೋಗ್ಯವೂ ಚೆನ್ನಾಗಿದೆ ಎಂದು ತಿಳಿಸಿದ್ದಾರೆ.
ಹೆಲಿಕಾಪ್ಟರ್ ಪತನಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇದು ಇರಾನ್ ದಾಳಿಯಿಂದ ಸಂಭವಿಸಿದೆಯೇ ಅಥವಾ ತಾಂತ್ರಿಕ ದೋಷದಿಂದ ಕೆಳಗೆ ಬಿದ್ದಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚಾಗಿರುವ ಸಮಯದಲ್ಲೇ ಈ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
AH-64 ಅಪಾಚೆ ಹೆಲಿಕಾಪ್ಟರ್ ಅಮೆರಿಕ ಸೇನೆಯ ಪ್ರಮುಖ ಯುದ್ಧ ಅಸ್ತ್ರಗಳಲ್ಲಿ ಒಂದಾಗಿದೆ. ಹೆಲ್‌ಫೈರ್ ಕ್ಷಿಪಣಿಗಳಿಂದ ಸಜ್ಜುಗೊಂಡಿರುವ ಈ ಹೆಲಿಕಾಪ್ಟರ್ ಅನ್ನು ಅಮೆರಿಕ ಹಲವು ಸೇನಾ ಕಾರ್ಯಾಚರಣೆಗಳಲ್ಲಿ ಬಳಸುತ್ತಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ಕಾರ್ಯಾಚರಣೆಯಲ್ಲೂ ಅಪಾಚೆ ಹೆಲಿಕಾಪ್ಟರ್ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಸಂಘರ್ಷದಲ್ಲಿ ಕಳೆದುಕೊಂಡ ಮೊದಲ ಅಪಾಚೆ ಹೆಲಿಕಾಪ್ಟರ್ ಇದಾಗಿರಬಹುದು ಎನ್ನಲಾಗಿದೆ. ಘಟನೆ ಕುರಿತು ಶೀಘ್ರದಲ್ಲೇ ಅಧಿಕೃತ ವರದಿ ಬಿಡುಗಡೆ ಮಾಡಲಾಗುವುದು ಎಂದು ಟ್ರಂಪ್ ತಿಳಿಸಿದ್ದಾರೆ. ಜೊತೆಗೆ ಇರಾನ್ ಜೊತೆಗಿನ ಮಾತುಕತೆ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.








