



ಮಾಗಡಿ (ರಾಮನಗರ): ತಿಂಗಳ ಹಿಂದೆ ಮಾಗಡಿ ತಾಲ್ಲೂಕಿನ ಸಿಡಿಗನಹಳ್ಳಿಯಲ್ಲಿ ಸಂಭವಿಸಿದ್ದ ಹಿಟ್ ಆ್ಯಂಡ್ ರನ್ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿದ್ದ ಪ್ರಕರಣ ಇದೀಗ ಮತ್ತೊಮ್ಮೆ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಪುತ್ರನ ಕಾರು ಅಪಘಾತಕ್ಕೆ ಕಾರಣವಾಗಿದ್ದು, ಪರಿಹಾರ ನೀಡುವುದಾಗಿ ಕರೆಸಿಕೊಂಡು ಕುಟುಂಬವನ್ನು ಅವಮಾನಿಸಿದ್ದಾರೆ ಎಂದು ಮೃತ ಯುವಕನ ಕುಟುಂಬ ಗಂಭೀರ ಆರೋಪ ಮಾಡಿದೆ.

ಬೆಳಗುಂಬ ಗ್ರಾಮದ ರಾಜೇಶ್ (27) ಎಂಬ ಯುವಕ ಅಪಘಾತದಲ್ಲಿ ಸಾವನ್ನಪ್ಪಿದ್ದನು. ಈ ಸಂಬಂಧ ರಾಜೇಶ್ ತಂದೆ ಗುಡ್ಡೆಗೌಡ, ತಾಯಿ ನಾಗರತ್ನ ಹಾಗೂ ಅಕ್ಕ ನಂದಿನಿ ಅವರು ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿ ತಮ್ಮ ನೋವು ವ್ಯಕ್ತಪಡಿಸಿದರು.
ಅಪಘಾತದ ಬಳಿಕ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದ ಎಚ್.ಎಂ. ರೇವಣ್ಣ ಅವರು, ಮಾಗಡಿಯಲ್ಲಿರುವ ತಮ್ಮ ತೋಟದ ಮನೆಗೆ ಕರೆಯಿಸಿಕೊಂಡು ಅವಮಾನಕಾರಿ ಮಾತುಗಳನ್ನು ಆಡಿದ್ದಾರೆ ಎಂದು ಕುಟುಂಬ ಆರೋಪಿಸಿದೆ.
“ನಿಮ್ಮ ಮಗ ಸಾಯಲು ನಮ್ಮ ಕಾರೇ ಬೇಕಿತ್ತಾ?” ಎಂದು ಪ್ರಶ್ನಿಸಿ, ಪ್ರಕರಣವನ್ನು ಮಾಧ್ಯಮದ ಮುಂದೆ ತಂದಿದ್ದಕ್ಕೆ ಧಮ್ಕಿ ಹಾಕಲಾಗಿದೆ ಎಂದು ಅವರು ದೂರಿದರು.
ಪರಿಹಾರವಾಗಿ ₹2 ಲಕ್ಷ ನೀಡುವುದಾಗಿ ಹೇಳಿ, “ತೆಗೆದುಕೊಂಡು ಹೋಗಿ, ಇಲ್ಲವಾದರೆ ಬಿಡಿ. ಕಾರಿಗೆ ವಿಮೆ ಇದೆ, ಕೋರ್ಟ್‌ನಲ್ಲಿ ನೋಡಿಕೊಳ್ಳುತ್ತೇನೆ” ಎಂದು ಉಡಾಫೆಯಾಗಿ ಮಾತನಾಡಿದ್ದಾರೆ ಎಂದು ಕುಟುಂಬದವರು ಬೇಸರ ವ್ಯಕ್ತಪಡಿಸಿದರು.
“ಏಕೈಕ ಮಗನನ್ನು ಕಳೆದುಕೊಂಡ ನೋವಿನಲ್ಲಿದ್ದರೂ ಮಾನವೀಯತೆ ತೋರಲಿಲ್ಲ. ಊರಿನವರ ಮುಂದೆ ವಯಸ್ಸಾದ ತಂದೆ-ತಾಯಿಗೆ ನೋವಾಗುವಂತೆ ಮಾತನಾಡಿದರು” ಎಂದು ಕುಟುಂಬದವರು ಹೇಳಿದರು. ಪರಿಹಾರವನ್ನು ಸ್ವೀಕರಿಸದೇ ಕುಟುಂಬ ಮನೆಗೆ ವಾಪಸ್ಸಾಗಿದೆ.
ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ಅಪಘಾತ ನಡೆಸಿದ ಚಾಲಕನನ್ನು ಇನ್ನೂ ಪತ್ತೆಹಚ್ಚಿಲ್ಲ ಎಂದು ಕುಟುಂಬ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸುವುದಾಗಿ ಮೃತನ ಅಕ್ಕ ನಂದಿನಿ ಸ್ಪಷ್ಟಪಡಿಸಿದರು.
ಪ್ರಕರಣದ ಹಿನ್ನೆಲೆ
ಡಿ.12ರಂದು ರಾತ್ರಿ ಮಾಗಡಿ ತಾಲ್ಲೂಕಿನ ಗುಡೇಮಾರನಹಳ್ಳಿ ಮುಖ್ಯರಸ್ತೆಯ ಸಿಡಿಗನಹಳ್ಳಿ ಬಳಿ, ಎಚ್.ಎಂ. ರೇವಣ್ಣ ಪುತ್ರ ಆರ್. ಶಶಾಂಕ್ ಅವರ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಸವಾರ ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದನು. ಚಾಲಕ ಕಾರು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದ. ಈ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಚ್.ಎಂ. ರೇವಣ್ಣ ಪ್ರತಿಕ್ರಿಯೆ
ಅಪಘಾತ ಸಂಭವಿಸಿರುವುದು ಸತ್ಯ. ಪ್ರಕರಣದ ತನಿಖೆ ನಡೆಯುತ್ತಿದೆ. ಮಾನವೀಯ ದೃಷ್ಟಿಯಿಂದ ಕುಟುಂಬವನ್ನು ಮನೆಗೆ ಕರೆಸಿಕೊಂಡಿದ್ದೆ ಎಂದು ಎಚ್.ಎಂ. ರೇವಣ್ಣ ಸ್ಪಷ್ಟಪಡಿಸಿದ್ದಾರೆ.
“ಅವರು ಮಗಳ ಮದುವೆಗೆ ₹25 ಲಕ್ಷ ಕೇಳಿದರು. ₹2 ಲಕ್ಷ ಕೊಡುತ್ತೇನೆ ಎಂದಾಗ ಒಪ್ಪದೇ ಹೊರಟುಹೋದರು. ಅವಮಾನಿಸುವ ಉದ್ದೇಶ ನನ್ನದಲ್ಲ. ಕಾರಿಗೆ ವಿಮೆ ಇದೆ, ಮುಂದೆ ವಿಮಾ ಕಂಪನಿಯಿಂದ ಪರಿಹಾರ ಸಿಗುತ್ತದೆ” ಎಂದು ಅವರು ಪ್ರತಿಕ್ರೀಯಿಸಿದ್ದಾರೆ.










