



ದುಬೈ: ಹಾರ್ಮುಜ್ ಜಲಸಂಧಿಯಲ್ಲಿ ಯುಎಇ ಟ್ಯಾಂಕರ್‌ಗಳ ಮೇಲೆ ಇರಾನ್ ನಡೆಸಿದ ಕ್ರೂಸ್ ಕ್ಷಿಪಣಿ ದಾಳಿಯಲ್ಲಿ ಒಬ್ಬ ಭಾರತೀಯ ಸಾವನ್ನಪ್ಪಿ, 6 ಮಂದಿ ಗಾಯಗೊಂಡಿದ್ದಾರೆ.
ಯುಎಇ ರಕ್ಷಣಾ ಸಚಿವಾಲಯವು ನೀಡಿರುವ ಮಾಹಿತಿಯ ಪ್ರಕಾರ, ಒಮಾನ್ ಜಲಪ್ರದೇಶದ ವ್ಯಾಪ್ತಿಯಲ್ಲಿರುವ ಹಾರ್ಮುಜ್ ಜಲಸಂಧಿಯ ದಕ್ಷಿಣದ ಹಡಗು ಮಾರ್ಗದಲ್ಲಿ ಚಲಿಸುತ್ತಿದ್ದ ಯುಎಇ ಧ್ವಜ ಹೊಂದಿದ್ದ ಎರಡು ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ಕ್ರೂಸ್ ಕ್ಷಿಪಣಿ ದಾಳಿ ನಡೆಸಿದೆ.
ದಾಳಿಗೆ ಒಳಗಾದ ಎರಡು ರಾಷ್ಟ್ರೀಯ ಟ್ಯಾಂಕರ್‌ಗಳನ್ನು ‘ಮೊಂಬಾಸಾ’ ಮತ್ತು ‘ಅಲ್ ಬಹಿಯಾ’ ಎಂದು ಗುರುತಿಸಲಾಗಿದ್ದು, ಈ ದಾಳಿಯಲ್ಲಿ ಮೊಂಬಾಸಾ ಟ್ಯಾಂಕರ್‌ನಲ್ಲಿದ್ದ ಒಬ್ಬ ಭಾರತೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ ಒಟ್ಟು 8 ಜನ ಗಾಯಗೊಂಡಿದ್ದು, ಅವರಲ್ಲಿ 6 ಮಂದಿ ಭಾರತೀಯರು ಮತ್ತು ಇಬ್ಬರು ಉಕ್ರೇನ್ ಪ್ರಜೆಗಳಾಗಿದ್ದಾರೆ.
ಗಾಯಗೊಂಡವರ ಪೈಕಿ ನಾಲ್ವರ ಪರಿಸ್ಥಿತಿ ಗಂಭೀರವಾಗಿದೆ. ಕ್ಷಿಪಣಿ ದಾಳಿಯಿಂದಾಗಿ ಎರಡೂ ಟ್ಯಾಂಕರ್‌ಗಳಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಸಾಕಷ್ಟು ವಸ್ತು ಹಾನಿಯಾಗಿದೆ.
ಈ ದಾಳಿಯನ್ನು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಮತ್ತು ಕಡಲ್ಗಳ್ಳತನ ಎಂದು ಯುಎಇ ತೀವ್ರವಾಗಿ ಖಂಡಿಸಿ, ಜಾಗತಿಕ ಇಂಧನ ಭದ್ರತೆ ಮತ್ತು ಪ್ರಾದೇಶಿಕ ಸ್ಥಿರತೆಗೆ ಧಕ್ಕೆ ತರುವ ಇಂತಹ ಪ್ರಚೋದನಾರಹಿತ ದಾಳಿಗಳನ್ನು ಇರಾನ್ ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದೆ. ತನ್ನ ದೇಶದ ಭದ್ರತೆ ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳುವ ಮತ್ತು ಈ ದಾಳಿಗೆ ಪ್ರತಿಯಾಗಿ ಪ್ರತಿಕ್ರಿಯಿಸುವ ಸಂಪೂರ್ಣ ಹಕ್ಕನ್ನು ಯುಎಇ ಕಾಯ್ದಿರಿಸಿಕೊಂಡಿದೆ ಎಂದು ತಿಳಿಸಿದೆ.







