ಪೊಲೀಸರ ಬಲೆಗೆ ಬಿದ್ದ ಮಹಿಳೆ



ಹುಬ್ಬಳ್ಳಿ: ಮಹಿಳೆಯೊಬ್ಬಳು ಕದ್ದ ಚಿನ್ನವನ್ನು ಗೋಲ್ಡ್ ಲೋನ್ ಕಂಪನಿಗೆ ಮಾರಾಟ ಮಾಡಲು ಯತ್ನಿಸಿದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ರಾಣೇಬೆನ್ನೂರುನಲ್ಲಿ ನಡೆದಿದೆ. ಹುಬ್ಬಳ್ಳಿ ಮೂಲದ ಮಹಿಳೆ ಸುಮಾರು 236 ಗ್ರಾಂ ತೂಕದ ಕದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಲು ರಾಣೇಬೆನ್ನೂರಿನ ಖಾಸಗಿ ಗೋಲ್ಡ್ ಲೋನ್ ಕಂಪನಿಗೆ ಬಂದಿದ್ದಳು.
ಆಕೆಯ ನಡವಳಿಕೆ ಹಾಗೂ ಚಿನ್ನಕ್ಕೆ ಸಂಬಂಧಿಸಿದ ದಾಖಲೆಗಳ ಬಗ್ಗೆ ಅನುಮಾನಗೊಂಡ ಕಂಪನಿಯ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ರಾಣೇಬೆನ್ನೂರು ನಗರ ಪೊಲೀಸರು ಮಹಿಳೆಯನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ.
ಈ ಕಾರ್ಯಾಚರಣೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮಹಿಳೆಯ ಬಳಿ ಒಟ್ಟು 236 ಗ್ರಾಂ ಚಿನ್ನ ಇರುವುದು ಪತ್ತೆಯಾಗಿದ್ದು, ಅದರಲ್ಲಿ ಸುಮಾರು 40 ಗ್ರಾಂ ಚಿನ್ನವನ್ನು ಮಾರಾಟ ಮಾಡಲು ಆಕೆ ಮುಂದಾಗಿದ್ದಳು ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ಮುಂದಿನ ತನಿಖೆ ಮುಂದುವರಿದಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.








