





ಢಾಕಾ: ಬಾಂಗ್ಲಾದೇಶದ ಸರ್ಕಾರಿ ಕಚೇರಿಯಲ್ಲಿರುವ ಭಾರತದ ಅಧಿಕಾರಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ(ಮೇ 19) ಬೆಳಗ್ಗೆ ನಡೆದಿದೆ.
ಚಿತ್ತಗಾಂಗ್‌ನಲ್ಲಿರುವ ಭಾರತೀಯ ಸಹಾಯಕ ಹೈಕಮಿಷನ್‌ನಲ್ಲಿ ಪ್ರೋಟೋಕಾಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನರೇಂದ್ರ ಧಾರ್(35) ಅವರು ಕಚೇರಿಯ ಆವರಣದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಂಗಳವಾರ(ಮೇ 19) ಬೆಳಿಗ್ಗೆ ನರೇಂದ್ರ ಧಾರ್ ಅವರು ತಮ್ಮ ಕೊಠಡಿಯೊಳಗಿನಿಂದ ಯಾವುದೇ ಪ್ರತಿಕ್ರಿಯೆ ನೀಡದಿರುವುದನ್ನು ಗಮನಿಸಿದ ಮಿಷನ್ ಅಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದರು. ಕಾರ್ಯಪ್ರವೃತ್ತರಾದ ಪೊಲೀಸರು ಮೃತದೇಹವನ್ನು ಕಚೇರಿಯಿಂದ ಹೊರತೆಗೆದು, ಚಟ್ಟೋಗ್ರಾಮ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದರು ಎಂದು ತಿಳಿದು ಬಂದಿದೆ.
ನರೇಂದ್ರ ಧಾರ್ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅಧಿಕಾರಿಯ ಕುಟುಂಬದೊಂದಿಗೆ ಬಾಂಗ್ಲಾದೇಶದಲ್ಲಿ ಭಾರತದ ಹೈಕಮಿಷನ್ ಅಧಿಕಾರಿಗಳು ಸಂಪರ್ಕದಲ್ಲಿದ್ದು, ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ನಂತರ ಮೃತದೇಹವನ್ನು ಭಾರತೀಯ ಮಿಷನ್‌ಗೆ ಹಸ್ತಾಂತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.








