ಬೆಂಗಳೂರು: ತಾಂತ್ರಿಕ ಕಾರಣದಿಂದಾಗಿ ‘ಇಂಡಿಗೋ’ ವಿಮಾನಯಾನ ಸಂಸ್ಥೆಯ ವಿಮಾನಗಳ ಹಾರಾಟದಲ್ಲಿ ಸತತ ನಾಲ್ಕನೇ ದಿನವೂ ವ್ಯತ್ಯಯವಾಗಿದ್ದು, ಇದರಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಪ್ರಯಾಣಿಕರು 12 ಕಾಲ ಕಾದು ಕುಳಿತ್ತಿದ್ದು, ಸಂಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.


ಮಾಹಿತಿ ಪ್ರಕಾರ ಶುಕ್ರವಾರ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 102 ವಿಮಾನ ಹಾರಾಟ ರದ್ದಾಗಿದೆ. 52 ಆಗಮನ ಮತ್ತು 50 ನಿರ್ಗಮನ ವಿಮಾನಗಳು ರದ್ದಾಗಿರುವುದರಿಂದ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ತಾಸುಗಟ್ಟಲೆ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಇತ್ತ ಸೂಕ್ತ ಮಾಹಿತಿ ನೀಡದ ಇಂಡಿಗೋ ಸಂಸ್ಥೆ ವಿರುದ್ಧ ಪ್ರಯಾಣಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲಿನ ಸನ್ನಿವೇಶ ಕುರಿತು ಮಾಹಿತಿ ನೀಡಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯದಿಂದ ದೇಶಾದ್ಯಂತ 500ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. 4ನೇ ದಿನವೂ ಪ್ರಯಾಣಿಕರ ಪರದಾಟ ಮುಂದುವರೆದಿದೆ. ಕಾದು ಕಾದು ಸುಸ್ತಾಗಿ ಎಲ್ಲೆಂದರಲ್ಲಿ ನಿದ್ದೆ ಮಾಡುತ್ತಿರುವ ಪ್ರಯಾಣಿಕರು, ಒಳಗೆ ಇರಲಾಗದೇ ಹೊರಗೂ ಬರಲಾಗದ ಸ್ಥಿತಿ ಅನುಭವಿಸಿದ್ದಾರೆ.

ನಿತೀನ್ ಮಲ್ಪಾನಿ ಎಂಬವರು ಈ ಕುರಿತು ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಇಂಡಿಗೋ ಸಿಬ್ಬಂದಿಗಳೇ ನೀವು ಏನು ಮಾಡುತ್ತಿದ್ದೀರಾ? ಕಳೆದ ರಾತ್ರಿ 8 ಗಂಟೆಯಿಂದ ಈಗಿನವರೆಗೂ ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೇ ಇದ್ದೀವೆ. ಸರಳವಾಗಿ ಸಿಬ್ಬಂದಿಯ ಕೆಲಸದ ಅವಧಿ ವೇಳಾಪಟ್ಟಿ ಬದಲಾಯಿಸಲು ಮಕ್ಕಳು, ವೃದ್ಧರು, ರೋಗಿಗಳ ಜೊತೆ ಆಟವಾಡುತ್ತಿದ್ದೀರಾ? ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.


ಶುಕ್ರವಾರ ಪ್ರಮುಖ ನಗರಗಳಿಗೆ ಇಂಡಿಗೋ ವಿಮಾನಗಳನ್ನು ರದ್ದುಗೊಳಿಸಿದಾಗ, ಇತರೆ ವಿಮಾನ ಕಂಪೆನಿಗಳು, ಪ್ರಯಾಣಿಕರನ್ನು ದಿಗ್ಬ್ರಮೆಗೊಳಿಸುವ ದರಗಳನ್ನು ನಿಗದಿಪಡಿಸಿವೆ. ಟಿಕೆಟ್ ದರ ಏರಿಸಲಾಗಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.








