ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ವೈಸ್ ಚಾನ್ಸಲರ್ ಮಧುಕರ್ ಅಂಗೂರ್ಗೆ ಇಡಿ ಸಮನ್ಸ್ ನೀಡಿದೆ.
ಅಮೆರಿಕ ದೇಶದ ಪೌರತ್ವ ಹೊಂದಿರುವ ಮಧುಕರ್ ಅಂಗೂರ್ ಸುಮಾರು 100 ಕೋಟಿ ರೂಪಾಯಿಗಳ ಸಾರ್ವಜನಿಕ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮನಿ ಲ್ಯಾಂಡರಿಂಗ್ ಸಂಬಂಧಿಸಿದ ಹೊಸ ಪ್ರಕರಣವೊಂದರಲ್ಲಿ ಇಸಿಐಆರ್ ದಾಖಲಿಸಿದ ಇಡಿ ಅಂಗೂರ್ ಮತ್ತು ಸಹವರ್ತಿಗಳ ಬ್ಯಾಂಕ್ ಖಾತೆ ವಿವರ, ಸ್ಥಿರ ಮತ್ತು ಚಿರಾಸ್ತಿ ವಿವರಗಳು.. ಹಾಗೂ 10 ವರ್ಷಗಳ ಐಟಿ ರಿಟರ್ನ್ಸ್ ಸಲ್ಲಿಸುವಂತೆ ನಿರ್ದೇಶನ ನೀಡಿದೆ.
2010 -2017 ನಡುವೆ ವಿಶ್ವವಿದ್ಯಾಲಯ ಮತ್ತು ಅದರ ಪ್ರಾಯೋಜಕತ್ವ ಹೊಂದಿದ್ದ ಅಂಗೂರ್ ಕುಲಪತಿ ಸ್ಥಾನದಲ್ಲಿದ್ದಾಗ ಕಂಪನಿಯಿಂದ ಬೃಹತ್ ಮೊತ್ತದ ಹಣ ದುರುಪಯೋಗ ಪಡಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಹಲವಾರು ಕ್ರಿಮಿನಲ್ ಆರೋಪಗಳನ್ನು ಹೊಂದಿರುವ ಅಂಕೂರ್ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಇತ್ತೀಚೆಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ದೊಡ್ಡ ಮೊತ್ತವನ್ನು ಪಾವತಿ ಮಾಡಿದ್ದಾರೆ. ಡಿಸೆಂಬರ್ 2 ರಂದು ಹಾಜರಾಗುವಂತೆ ಇಡಿ ಸಮನ್ಸ್ ಜಾರಿಮಾಡಿದ್ದು , ತನಿಖೆಗೆ ಸಹಕರಿಸದಿದ್ದರೆ ಅವರಿಗೆ ದೊಡ್ಡ ಸಂಕಷ್ಟ ಎದುರಾಗೋದು ಗ್ಯಾರಂಟಿ ಎನ್ನಲಾಗುತ್ತಿದೆ.