Thursday, April 25, 2024
spot_imgspot_img
spot_imgspot_img

ವೈದ್ಯರು ಜನೌಷಧಿಯನ್ನೇ ಶಿಫಾರಸು ಮಾಡಬೇಕು- ಡಿ.ವಿ. ಸದಾನಂದ ಗೌಡ

- Advertisement -G L Acharya panikkar
- Advertisement -

ನವದೆಹಲಿ: ಜನ ಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಲಭ್ಯವಾಗಿಸಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯನ್ನು ರೂಪಿಸಲಾಗಿದೆ, ವೈದ್ಯರು ಜನೌಷಧಿಯನ್ನೇ ಶಿಫಾರಸು ಮಾಡಿ ಔಷಧ ಚೀಟಿ ಬರೆದುಕೊಡಬೇಕು ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ತಿಳಿಸಿದ್ದಾರೆ.

ದೇಶಾದ್ಯಂತ ಆರಂಭಗೊಂಡ ಜನೌಷಧಿ ಸಪ್ತಾಹದ ಸಂದರ್ಭದಲ್ಲಿ ಮಾತನಾಡಿದ ಅವರು ಜನೌಷಧಿಯನ್ನೇ ಶಿಫಾರಸು ಮಾಡುವುದರಿಂದ ಜನಸಾಮಾನ್ಯರಿಗೆ ದೊಡ್ಡಪ್ರಮಾಣದಲ್ಲಿ ಹಣ ಉಳಿತಾಯವಾಗಲಿದೆ ಎಂದರು.

ರಾಸಾಯನಿಕ ಇಲಾಖೆ ಅಧೀನದ ಬಿಪಿಪಿಐ ಸಂಸ್ಥೆಯು (ಪಿಎಂಬಿಜೆಪಿ) ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ದೇಶದ 734 ಜಿಲ್ಲೆಗಳಲ್ಲಿ ಈಗಾಗಲೇ 7,500 ಕ್ಕಿಂತಲೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ತೆರೆದಿದೆ. ಜನೌಷಧಿ ಮಳಿಗೆಗಳ ಮೂಲಕ 745 ವಿಧದ ಔಷಧಗಳು ಹಾಗೂ 117 ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಮಾರಾಟ ಮಾಡಲಾಗುತ್ತಿದೆ.

ಸಾಮಾನ್ಯ ಔಷಧ ಅಂಗಡಿಗಳಲ್ಲಿ ಸಿಗುವ ಔಷಧಕ್ಕೂ ಜನೌಷಧ ಕೇಂದ್ರಗಳಲ್ಲಿ ಸಿಗುವ ಔಷಧಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಸಾಮಾನ್ಯ ಔಷಧ ಅಂಗಡಿಗಳಲ್ಲಿ ಕಂಪನಿಗಳ ಬ್ರಾಂಡ್​ನಲ್ಲಿ ಔಷಧವನ್ನು ಮಾರಾಟ ಮಾಡಲಾಗುತ್ತಿದೆ. ಆದರೆ ಜನೌಷಧ ಅಂಗಡಿಗಳಲ್ಲಿ ಮೂಲ ರಾಸಾಯನಿಕದ ಹೆಸರಿನಲ್ಲಿಯೇ ಔಷಧ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.

ಜನೌಷಧಿ ಸಪ್ತಾಹದ ಅಂಗವಾಗಿ ದೇಶಾದ್ಯಂತ 1,000 ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗಿದೆ. ಉಚಿತ ಆರೋಗ್ಯ ತಪಾಸಣೆ, ಉಚಿತ ಔಷಧ ವಿತರಣೆ ಸೇರಿದಂತೆ ಜನೌಷಧಿ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಒಂದು ವಾರಕಾಲ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೊನೆಯ ದಿನ ಮಾರ್ಚ್ 7 ರಂದು ಪ್ರಧಾನಿ ನರೇಂದ್ರ ಮೋದಿಯವರು ಜನೌಷಧಿ ಅಂಗಡಿ ಮಾಲಿಕರು ಹಾಗೂ ಫಲಾನುಭವಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.

ಔಷಧ ಗುಣಮಟ್ಟದ ಎಲ್ಲ ಮಾನದಂಡಗಳೂ ಜನೌಷಧಗಳಿಗೆ ಅನ್ವಯವಾಗುತ್ತದೆ. ಕಳೆದ ಸಾಲಿನಲ್ಲಿ (2019-20) 433.6 ಕೋಟಿ ರೂಪಾಯಿ ಜನೌಷಧ ಮಾರಾಟ ಮಾಡಲಾಗಿತ್ತು. ಇದರಿಂದ ಜನರಿಗೆ ಸುಮಾರು 2,500 ಕೋಟಿ ರೂಪಾಯಿ ಉಳಿತಾಯವಾಗಿತ್ತು. ಪ್ರಸಕ್ತ ಸಾಲಿನಲ್ಲಿ 586.5 ಕೋಟಿ ರೂ ಮೌಲ್ಯದ (ಎಂಆರ್​ಪಿ) ಜನೌಷಧ ಮಾರಾಟವಾಗಿದೆ. ಇದರಿಂದ ಜನರಿಗೆ ಕನಿಷ್ಠವೆಂದರೂ 3,500 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ವಿವರಿಸಿದರು.

ಜನೌಷಧಿ ಅಂಗಡಿಗಳ ಮೂಲಕ ಮಹಿಳೆಯರ ಅನುಕೂಲಕ್ಕಾಗಿ ಕೇವಲ ಒಂದು ರೂಪಾಯಿಗೆ ‘ಸುವಿಧಾ’ ಹೆಸರಿನ ಸ್ಯಾನಿಟರಿ ಪ್ಯಾಡ್ ಮಾರಾಟ ಮಾಡಲಾಗುತ್ತಿದೆ (ಬ್ರಾಂಡೆಡ್ ಸ್ಯಾನಿಟರಿ ಪ್ಯಾಡ್ ಬೆಲೆ 4 ರಿಂದ 5 ರೂಪಾಯಿ). ಈ ವರ್ಷ 10.76 ಕೋಟಿ ಸುವಿಧಾ ಸ್ಯಾನಿಟರಿ ಪ್ಯಾಡ್​​ಗಳನ್ನು ಮಾರಾಟ ಮಾಡಲಾಗಿದೆ. ಕರ್ನಾಟಕದಲ್ಲಿ 92.8 ಲಕ್ಷ ಸುವಿಧಾ ಪ್ಯಾಡ್ ಗಳನ್ನು ಮಾರಾಟ ಮಾಡಲಾಗಿದೆ ಎಂದರು.

ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅತಿಹೆಚ್ಚು ಜನೌಷಧಿ ಕೇಂದ್ರಗಳನ್ನು ಆರಂಭಿಸಲಾಗಿದೆ. ರಾಜ್ಯದಲ್ಲಿ ಸದ್ಯ 865 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದಲ್ಲಿ 2020-21 ಸಾಲಿಗಾಗಿ (ಈ ತಿಂಗಳು ಮಾರ್ಚ್ ಗೆ ಕೊನೆಗೊಳ್ಳುವ) 125 ಕೋಟಿ ರೂಪಾಯಿ ಮಾರಾಟದ ಗುರಿಯನ್ನು ನೀಡಲಾಗಿತ್ತು. ಆದರೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ಫೆಬ್ರವರಿ ಕೊನೆಯಲ್ಲಿ 131 ಕೋಟಿ ರೂಪಾಯಿ ಜನೌಷಧಿ ಮಾರಾಟವಾಗಿದೆ. ಇದರಿಂದ ರಾಜ್ಯದ ಜನರಿಗೆ ಸುಮಾರು 800 ಕೋಟಿ ರೂಪಾಯಿ ಉಳಿತಾಯವಾಗಿದೆ. ರಾಜ್ಯದಲ್ಲಿ 2018-19ರಲ್ಲಿ 68.3 ಕೋಟಿ ರೂ ಹಾಗೂ 2019-20 ರಲ್ಲಿ 94.2 ಕೋಟಿ ರೂ ಮೌಲ್ಯದ ಜನೌಷಧಿ ಮಾರಾಟವಾಗಿತ್ತು ಎಂದ ಸಚಿವರು ಕೋವಿಡ್ ಸಂದರ್ಭದಲ್ಲಿ ಕೂಡಾ ದಾಖಲೆ ವಹಿವಾಟು ನಡೆಸಿದ ಜನೌಷಧಿ ಮಾರಾಟಗಾರರು ಹಾಗೂ ಬಿಪಿಪಿಐ ಅಧಿಕಾರಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.

- Advertisement -

Related news

error: Content is protected !!