





ವಿಟ್ಲ/ಕನ್ಯಾನ: ಯಕ್ಷಗಾನ ಕಲೆಯು ನಮ್ಮ ಸಂಸ್ಕೃತಿಯ ಹೆಮ್ಮೆ, ಅದನ್ನು ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯ ಶ್ಲಾಘನೀಯ ಎಂದು ಪರಮಪೂಜ್ಯ ಶ್ರೀ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಅವರು ಕನ್ಯಾನದ ಗುರುದೇವ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಜರಗಿದ ‘ಆರ್ ಕೆ ಯಕ್ಷಗಾನ ಕಲಾ ಕೇಂದ್ರ ವಿಟ್ಲ’ ಇದರ ಎರಡನೇ ಶಾಖೆಯ ಭವ್ಯ ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಸನ್ನಿಧಾನ ವಹಿಸಿ, ಜ್ಯೋತಿ ಬೆಳಗಿಸಿ ಆಶೀರ್ವದಿಸಿದರು.

ಇದೇ ಸಂದರ್ಭದಲ್ಲಿ ದಿವ್ಯ ಉಪಸ್ಥಿತಿ ವಹಿಸಿದ್ದ ಪರಮ ಪೂಜ್ಯ ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂಸ್ಥೆಯ ಕಲಾ ಸೇವೆಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಧಾರ್ಮಿಕ ಮುಖಂಡರಾದ ಕೃಷ್ಣಯ್ಯ ಕೆ. (ವಿಟ್ಲ ಅರಮನೆ), ಸಂಸ್ಥೆಯ ನೃತ್ಯ ಗುರುಗಳಾದ ರಕ್ಷಿತ್ ಶೆಟ್ಟಿ ಪಡ್ರೆ ಹಾಗೂ ಶ್ರೀಮಾತ ಕನ್ಯಾನದ ಡಾಕ್ಟರ್ ರಾಮಚಂದ್ರ ಕೆ. ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.



ಆರ್ ಕೆ ಸಮೂಹ ಸಂಸ್ಥೆಗಳ ನಿರ್ದೇಶಕರಾದ ರಾಜೇಶ್ ವಿಟ್ಲ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಬಂದಿದ್ದ ಸರ್ವರನ್ನೂ ಆದರದಿಂದ ಸ್ವಾಗತಿಸಿದರು. ಕುಮಾರಿ ಮೋನಿಕಾ ಅವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.ಮನೋಜ್ ಕುಮಾರ್ ಬನಾರಿ ಹಾಗೂ ಶ್ರೀಮತಿ ಶ್ವೇತಾ ಬಾಳೆಕೋಡಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಯಮುನ ಅಕ್ಕರೆಕೋಡಿ ಅವರು ವಂದನಾರ್ಪಣೆ ಮಾಡಿದರು. ಸಮಾರಂಭದಲ್ಲಿ ಕಲಾಭಿಮಾನಿಗಳು, ಸ್ಥಳೀಯ ಪ್ರಮುಖರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ನೂತನ ಶಾಖೆಗೆ ಪ್ರೋತ್ಸಾಹ ನೀಡಿದರು.








