



ಕಾಸರಗೋಡು: ಓಣಂ ಹಬ್ಬದ ಆಚರಣೆ ವೇಳೆ ಬಾಲಕನೋರ್ವ ಆಕಸ್ಮಿಕವಾಗಿ ತೆರೆದ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಕಾಞ್ಹಂಗಾಡ್ ಸಮೀಪದ ಚೀಮೇನಿಯಲ್ಲಿ ಗುರುವಾರ(ಆ.27) ರಾತ್ರಿ ನಡೆದಿದೆ.
ಮೃತ ಬಾಲಕನನ್ನು ಕೊಡಕ್ಕಾಡ್‌ನ ಆನಿಕ್ಕಾಡಿ ನಿವಾಸಿ ಧನೇಶ್ ಎಂಬವರ ಪುತ್ರ ಸನೂಪ್(15) ಎಂದು ಗುರುತಿಸಲಾಗಿದೆ.
ಸನೂಪ್ ರಾತ್ರಿ ವೇಳೆ ನಡೆಯುತ್ತಿದ್ದ ಓಣಂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಸಹಪಾಠಿಗಳೊಂದಿಗೆ ಹೊರಗೆ ತೆರಳಿದ್ದಾಗ, ಸಮೀಪದಲ್ಲಿದ್ದ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದಾರೆ. ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸನೂಪ್ ಅವರನ್ನು ಬಾವಿಯಿಂದ ಮೇಲಕ್ಕೆತ್ತಿದರು.
ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಣ್ಣೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ(ಆ.28) ಸಂಜೆ ಸನೂಪ್ ಮೃತಪಟ್ಟಿದ್ದಾರೆ.
ಚೀಮೇನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಸನೂಪ್ ಅವರು ಚೆರುವತ್ತೂರಿನ ತಿಮಿರಿ ಕುಟ್ಟಮಠ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ವರದಿ ಮೂಲಕ ತಿಳಿದುಬಂದಿದೆ.








