


ಕಾಸರಗೋಡು : ಕಾರು ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿಯಾಗಿ ತಂದೆ ಮೃತಪಟ್ಟು, ಅವರ ಪುತ್ರ ಗಂಭೀರ ಗಾಯಗೊಂಡ ಘಟನೆ ಕಾಸರಗೋಡು-ಬದಿಯಡ್ಕ ರಸ್ತೆಯ ನೆಲ್ಲಿಕಟ್ಟೆ ಬಳಿ ಇಂದು(ಫೆ.21) ಮುಂಜಾನೆ ನಡೆದಿದೆ.
ನೆಲ್ಲಿಕಟ್ಟೆ ನಿವಾಸಿ 68 ವರ್ಷದ ಶಂಸುದ್ದೀನ್ ಪೈಕ ಮೃತರು. ಅವರ ಪುತ್ರ ಸಲ್ಮಾನ್ ಹಾರಿಸ್(22) ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಗ್ಗೆ ಸುಮಾರು ಆರು ಗಂಟೆ ವೇಳೆಗೆ ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕೆಳಗಿನ ನೆಲ್ಲಿಕಟ್ಟೆಯಲ್ಲಿ ಅಪಘಾತ ನಡೆದಿದ್ದು, ಕಾಸರಗೋಡಿನಿಂದ ಪುತ್ತೂರಿಗೆ ಹೋಗುತ್ತಿದ್ದ ಬಸ್ ಮತ್ತು ನೆಲ್ಲಿಕಟ್ಟೆಯಿಂದ ಕಾಸರಗೋಡು ರೈಲು ನಿಲ್ದಾಣಕ್ಕೆ ಸಾಗುತ್ತಿದ್ದ ಕಾರು ಪರಸ್ಪರ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿದೆ.
ಅಪಘಾತದಲ್ಲಿ ತಂದೆ ಮತ್ತು ಮಗ ಇಬ್ಬರೂ ತೀವ್ರ ಗಾಯಗೊಂಡಿದ್ದು, ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರೂ, ತಂದೆ ಶಂಸುದ್ದೀನ್ ಅಷ್ಟರಲ್ಲಿ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಮೃತರು ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಅಗಲಿದ್ದಾರೆ.








