Thursday, April 25, 2024
spot_imgspot_img
spot_imgspot_img

ಕಾಸರಗೋಡು ಜಿಲ್ಲೆಯಲ್ಲಿ ಕೊರೋನ ಸೋಂಕು ಹೆಚ್ಚಳ: ಇಂದಿನಿಂದ ದ.ಕ-ಕಾಸರಗೋಡು ಗಡಿ ಬಂದ್- ಕೊರೋನಾ ನೆಗೆಟಿವ್ ವರದಿಯೊಂದಿಗೆ ಕೇವಲ ಐದು ಗಡಿಗಳಲ್ಲಿ ಮಾತ್ರ ದ.ಕ ಜಿಲ್ಲೆಗೆ ಪ್ರವೇಶಕ್ಕೆ ಅವಕಾಶ

- Advertisement -G L Acharya panikkar
- Advertisement -

ಮಂಗಳೂರು: ಕೇರಳದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಕಾಸರಗೋಡಿನಿಂದ ದ.ಕ. ಜಿಲ್ಲೆಗೆ ಆಗಮಿಸುವವರಿಗೆ ಕೊರೋನಾ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ.

ಇಂದಿನಿಂದ ಕೇವಲ ಐದು ಗಡಿಗಳು ಮಾತ್ರ ಸಂಚಾರಕ್ಕೆ ತೆರೆದಿರಲಿವೆ. ಈಗಾಗಲೇ ಉಳಿದ ಗಡಿಗಳನ್ನು ಬಂದ್ ಮಾಡುವ ಕಾರ್ಯವನ್ನು ಜಿಲ್ಲಾಡಳಿತ ಕೈಗೊಂಡಿದೆ. ಮಂಗಳೂರು ಸಂಪರ್ಕಿಸುವ ತಲಪಾಡಿ, ಸಾರಡ್ಕ, ಸುಳ್ಯದ ಜಾಲ್ಸೂರು, ಪುತ್ತೂರಿನ ನೆಟ್ಟಣಿಗೆ ಮುಡ್ನೂರು, ಮೇಣಾಲ ಗಡಿಗಳಲ್ಲಿ ಮಾತ್ರ ದ.ಕ. ಜಿಲ್ಲೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಉಳಿದಂತೆ ಇತರ ಗಡಿಗಳ ಮೂಲಕ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಮುಂದಿನ ಆದೇಶದ ವರೆಗೆ ಈ ಪ್ರಕ್ರಿಯೆ ಮುಂದುವರೆಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ರವರು ಮಾಹಿತಿ ನೀಡಿದ್ದಾರೆ.

ಈಗಾಗಲೇ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ಐದು ಗಡಿಗಳಲ್ಲಿ ದ.ಕ. ಜಿಲ್ಲೆಗೆ ಆಗಮಿಸುವವರಿಗೆ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ. ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವಿಲ್ಲದಿದ್ದಲ್ಲಿ ದ.ಕ. ಜಿಲ್ಲೆಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.

ಆರ್ ಟಿಪಿಸಿಆರ್ ಪರೀಕ್ಷೆ ನಡೆಸಿದ ವರದಿ ಕಡ್ಡಾಯವಾಗಿ ಹೊಂದಿರಲೇಬೇಕಾಗಿದೆ. 72 ಗಂಟೆಯೊಳಗೆ ನಡೆಸಿದ ಪರೀಕ್ಷಾ ವರದಿ ಕಡ್ಡಾಯವಾಗಿದೆ. 72 ಗಂಟೆ ಮೀರಿದ ವರದಿ ಪರಿಗಣಿಸಲಾಗುವುದಿಲ್ಲ. ಅಲ್ಲದೆ,ಆರ್ ಎಟಿ ಪರೀಕ್ಷಾ ವರದಿಯನ್ನು ಕೂಡಾ ಪರಿಗಣಿಸಲಾಗುವುದಿಲ್ಲ. ಅನುಮತಿಸಿದ ಗಡಿಗಳಲ್ಲಿ ಸ್ಕ್ರೀನಿಂಗ್ ಹಾಗೂ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ. ಚೆಕ್ ಪೋಸ್ಟ್ ಮೂಲಕ ದ.ಕ. ಜಿಲ್ಲೆಗೆ ಆಗಮಿಸುವವರ ನೋಂದಣಿ ಕಡ್ಡಾಯಗೊಳಿಸಲಾಗಿದೆ.

ಬಸ್ ಮೂಲಕ ಪ್ರಯಾಣಿಸುವವರಿಗೂ ಕೂಡಾ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. 72 ಗಂಟೆಯೊಳಗಿನ ನೆಗೆಟಿವ್ ವರದಿ ಸ್ಪಷ್ಟಗೊಂಡ ಬಳಿಕ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ನೆಗೆಟಿವ್ ವರದಿ ಹೊಂದಿರದಿದ್ದಲ್ಲಿ ಪ್ರಯಾಣಿಸಲು ಅವಕಾಶವಿಲ್ಲ ಎಂಬುವುದಾಗಿ ಸ್ಪಷ್ಟ ಆದೇಶ ಹೊರಡಿಸಲಾಗಿದೆ. ವರದಿ ಪರಿಶೀಲನೆ ನಡೆಸುವಂತೆ ಆಯಾ ಬಸ್ ಗಳ ನಿರ್ವಾಹಕರಿಗೆ ಜಿಲ್ಲಾಡಳಿತದಿಂದ ಸೂಚನೆ ನೀಡಿದೆ.

ದ.ಕ. ಜಿಲ್ಲೆಗೆ ಶಿಕ್ಷಣಕ್ಕೆ ಆಗಮಿಸುವ ವಿದ್ಯಾರ್ಥಿಗಳು ಹಾಗೂ ನಿತ್ಯ ಉದ್ಯೋಗಕ್ಕೆ ಆಗಮಿಸುವವರಿಗೆ 15 ದಿನಗಳಿಗೊಮ್ಮೆ ಪರೀಕ್ಷೆ ನಡೆಸಿ ವರದಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತೀ 15 ದಿನಗಳಿಗೊಮ್ಮೆ ಪರೀಕ್ಷೆ ನಡೆಸುವುದು ಕಡ್ಡಾಯಗೊಳಿಸಲಾಗಿದೆ. ಈ ನಡುವೆ ವೆನ್ಲಾಕ್ ಆಸ್ಪತ್ರೆಯಲ್ಲಿ ಉಚಿತ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

- Advertisement -

Related news

error: Content is protected !!