Monday, May 6, 2024
spot_imgspot_img
spot_imgspot_img

ಕಾಸರಗೋಡು ಜಿಲ್ಲೆಯ 11 ಗ್ರಾಮಗಳ ಕನ್ನಡ ಹೆಸರು ಬದಲಾವಣೆ ಇಲ್ಲ; ಶಾಸಕ ಎ.ಕೆ.ಎಂ.ಅಶ್ರಫ್ ಸ್ಪಷ್ಟನೆ

- Advertisement -G L Acharya panikkar
- Advertisement -

ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಕಳೆದ ಕೆಲವು ದಿನಗಳಿಂದ ವಿವಿಧ ಪ್ರದೇಶಗಳ ಹೆಸರುಗಳನ್ನು ಬದಲಾಯಿಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಸುಳ್ಳು. ಇಂತಹ ಯಾವುದೇ ಸುತ್ತೋಲೆ ಕೇರಳ ಸರಕಾರ ಹೊರಡಿಸಲಿಲ್ಲ. ಅಂತಹ ಯಾವುದೇ ಯೋಚನೆಯು ಸರಕಾರದ ಮುಂದಿಲ್ಲ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಸ್ಪಷ್ಟನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಶಾಸಕರು, ”ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನಲ್ಲಿ ಕನ್ನಡ ಹೆಸರು ಹೊಂದಿರುವ ಕೆಲವು ಗ್ರಾಮಗಳ ಹೆಸರುಗಳನ್ನು ಮಲಯಾಳೀಕರಣಗೊಳಿಸುವಂತೆ ಸರಕಾರ ಆದೇಶಿಸಿದೆ ಎಂಬ ವಿಚಾರ ಹಬ್ಬಿದ್ದು, ಇದು ಕಳೆದ ಕೆಲ ದಿನಗಳಿಂದ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ಅವರ ಕಚೇರಿಯನ್ನು ಮತ್ತು ಅವರ ಪಿಎ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ. ಕಾಸರಗೋಡು ಜಿಲ್ಲಾಧಿಕಾರಿಯನ್ನೂ ಪೋನ್ ಮ‌ೂಲಕ ಸಂಪರ್ಕಿಸಿ ಮಾಹಿತಿ ಪಡೆದಿದ್ದೇನೆ. ಈ ಎಲ್ಲಾ ಮಾಹಿತಿ ಪ್ರಕಾರ ಸ್ಥಳ ನಾಮ ಬದಲಾವಣೆ ಬಗ್ಗೆ ಯಾವುದೇ ಸುತ್ತೋಲೆ ಕೇರಳ ಸರಕಾರ ಹೊರಡಿಸಲಿಲ್ಲ. ಅಂತಹ ಯಾವುದೇ ಯೋಚನೆಯು ಸರಕಾರದ ಮುಂದಿಲ್ಲ. ಈ ನಡುವೆ ರೇಶನ್ ಕಾರ್ಡ್ ನಲ್ಲಿ ಸಾಫ್ಟ್ ವೇರ್ ಕಾರಣದಿಂದ ಕೆಲವು ಹೆಸರುಗಳಲ್ಲಿ ಬದಲಾವಣೆ ಆಗಿರುವುದು ನಿಜ. ಆದರೆ ಇದು ತಾಂತ್ರಿಕ ಕಾರಣದಿಂದ ಉಂಟಾದ ಲೋಪ. ಇದನ್ನು ಸರಿಪಡಿಸಲು ತುರ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ” ಎಂದು ಹೇಳಿದ್ದಾರೆ.

ಅಧಿಕೃತವಾಗಿ ಯಾವುದೇ ಸುತ್ತೋಲೆ ಇಲ್ಲದೆ ಕೇವಲ ಸಾಮಾಜಿಕ ಜಾಲತಾಣದಲ್ಲಿ ಬರುವ ಸುದ್ದಿಗಳ ಆಧಾರದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಟ್ವೀಟ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೀಡಿರುವ ಹೇಳಿಕೆ ಜನರಲ್ಲಿ ಗೊಂದಲವುಂಟುಮಾಡಿದೆ. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ನೀಡಿದ ಅನಗತ್ಯ ಹೇಳಿಕೆಯು ವಿಷಾದನೀಯ. ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಪರವಾಗಿ ಕೆಲವು ಪೂರಕ ಕ್ರಮಗಳನ್ನು ಕೇರಳದಲ್ಲಿ ಎಲ್ಲಾ ಸರಕಾರಗಳು ಕೈಗೊಂಡಿದೆ. ಭಾಷಾ ಅಲ್ಪಸಂಖ್ಯಾತರಿಗೆ ಸಮಸ್ಯೆ ಆಗುವ ವಿಚಾರಗಳನ್ನು ಸರಕಾರದ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಸರ್ಕಾರ ಧನಾತ್ಮಕವಾಗಿ ಸ್ಪಂದಿಸುವ ವಾತಾವರಣ ಕೇರಳದಲ್ಲಿದೆ. ಪರಿಹಾರವಾಗಬೇಕಾದ ಸಮಸ್ಯೆಗಳು ಇನ್ನೂ ಇರುವುದು ವಾಸ್ತವ. ಇದನ್ನು ಸಂಘಟಿತ ಪ್ರಯತ್ನದಿಂದ ಪರಿಹರಿಸಲು ಸಾಧ್ಯವಾಗುವ ವಾತಾವರಣ ನಿರ್ಮಾಣವಾಗಬೇಕು. ನಾಡಿನ ಭಾಷಾ ಸಾಮರಸ್ಯವನ್ನು, ಸಾಂಸ್ಕೃತಿಕ ವೈವಿಧ್ಯವನ್ನು ಉಳಿಸಿ ಬೆಳೆಸುವಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗಬಾರದು ಎಂದವರು ಮನವಿ ಮಾಡಿದ್ದಾರೆ.

ಮಂಜೇಶ್ವರದ ಶಾಸಕ ಹಾಗೂ ಒಬ್ಬ ಅಪ್ಪಟ ಕನ್ನಡಿಗನೆಂಬ ನೆಲೆಯಲ್ಲಿ ಕಾಸರಗೋಡಿನ ಯಾವುದೇ ಪ್ರದೇಶದ ಸ್ಥಳನಾಮವನ್ನು ಬದಲಾಯಿಸುವ ಷಡ್ಯಂತ್ರವೋ, ಸರಕಾರದ ಅದೇಶವೆನಾದರೂ ಬಂದರೆ ಆದರ ವಿರುದ್ಧದ ಹೋರಾಟಕ್ಕೆ ನೇತೃತ್ವ ನೀಡಲು ನಾನು ಸಿದ್ಧ. ಕನ್ನಡ ಅಲ್ಪಸಂಖ್ಯಾತರ ಸಂವಿಧಾನ ಬದ್ಧ ಹಕ್ಕುಗಳ ಸಂರಕ್ಷಣೆಯಲ್ಲಿ ಸದಾ ಜಾಗೃತನಾಗಿರುತ್ತೇನೆ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

- Advertisement -

Related news

error: Content is protected !!