Thursday, July 23, 2026
spot_imgspot_img
spot_imgspot_img

ಕೂಡಿ ಬಾಳಿದರೆ ಬಾಳು ಬಂಗಾರ

- Advertisement -
- Advertisement -

ಅಮ್ಮನಿಲ್ಲದೆ ಮಮತೆಯೆಲ್ಲಿ? ಅಪ್ಪನಿಲ್ಲದೆ ಭರವಸೆಯೆಲ್ಲಿ? ಗುರುವಿಲ್ಲದೆ ಗುರಿಯೆಲ್ಲಿ? ಕಣ್ಣು ಇದ್ದರೂ ಜಗತ್ತು ಹೇಗಿದೆಯೆಂದು ತೋರಿಸುವುದಕ್ಕೆ ಒಂದು ಜೊತೆ ಬೇಕು. ಕುಗ್ಗಿ ಕೂತಾಗ ಹೆಗಲು ಬಳಸಿ ಸಾಂತ್ವನ ಹೇಳುವುದಕ್ಕೂ ಒಂದು ಜೊತೆ ಬೇಕು. ನಮ್ಮ ಖುಷಿ ಹಂಚಿಕೊಳ್ಳುವಾಗ ಕೇಳುವುದಕ್ಕೆ ಒಂದು ಕಿವಿ ಬೇಕು. ಅಷ್ಟೇ ಅಲ್ಲ… ಆತ್ಮಹತ್ಯೆ ಮಾಡಿಕೊಳ್ಳಲು ಹೊರಟವನ ಹತ್ತಿರ ಯಾರಾದರೂ ಒಮ್ಮೆ ಮಾತನಾಡಿದಲ್ಲಿ ಅವನ ನಿರ್ಧಾರ ಬದಲಾಗಬಹುದೇನೋ..?!

ಬಾಗುವ ಮರಕ್ಕೆ ಕೋಲಿನ ಆಧಾರದಂತೆ, ಪ್ರತಿಯೊಬ್ಬ ಮಾನವನಿಗೂ ಅದು ತನ್ನ ಕುಟುಂಬದಲ್ಲಾಗಿರಲೀ ಅಥವಾ ಸಮಾಜದಲ್ಲೇ ಆಗಿರಲಿ ಜೀವನದ ಪ್ರತೀ ಹಂತದಲ್ಲೂ ಬೆಂಬಲದ ಅಗತ್ಯ, ಅನಿವಾರ್ಯತೆ ಇದ್ದೇ ಇರುತ್ತದೆ. ಕೋಟಿ ವರ್ಷಗಳ ಪ್ರಕೃತಿ ಪಾಠದಲ್ಲಿ ಮಿಂದ ಜೀವಿಗಳಿಂದ ಹೊರಹೊಮ್ಮಿದ ಗುಟ್ಟು ಎಂದರೆ ಸಹಜೀವನ. ಒಂದನ್ನೊಂದು ಆಧರಿಸಿ ಬದುಕುವ ಕಲೆಯನ್ನು ಪ್ರಕೃತಿ ಜೀವಿಗಳಿಗೆ ಕಲಿಸಿದೆ. ಪರಸ್ಪರ ಅವಲಂಬನೆಯೇ ಜೀವವಿಕಾಸದ ತಳಹದಿ. ಪರಸ್ಪರ ಸೌಹಾರ್ದ ಹಾಗೂ ಸಹಕಾರವಿಲ್ಲದ ಜೀವನ ಜೀವನವಲ್ಲ. ನಾವು ಬೆಳೆಯುವುದರ ಜೊತೆಗೆ ಸುತ್ತಮುತ್ತಲಿನ ಜನರ ಬೆಳೆವಣಿಗೆಯ ಕಾಳಜಿ ಹೊಂದಿದ್ದರೆ ಮಾತ್ರ ಲೋಕಕಲ್ಯಾಣ ಸಾಧ್ಯ.

ಮಾನವನ ಜೀವನವು ವೈಯಕ್ತಿಕ ಹಾಗೂ ಸಾಮಾಜಿಕ ಅಂಶಗಳಿಂದ ಕೂಡಿದ ಒಂದು ಸಂಯೋಜಿತ ವ್ಯವಸ್ಥೆಯಾಗಿದೆ. ವ್ಯಕ್ತಿಯೊಬ್ಬನು ತನ್ನ ಜೀವನದಲ್ಲಿ ಸಾಧನೆ ಸಾಧಿಸಲು ಶ್ರಮಿಸುವಾಗ, ಅವನು ಒಂದೆಡೆಯಿಂದಾಗಿ ಮುಂದೆ ಸಾಗುತ್ತಿದ್ದರೂ, ಬದುಕಿನ ಅನೇಕ ಹಂತಗಳಲ್ಲಿ ಇತರರ ಬೆಂಬಲ ಅವಶ್ಯಕವಾಗುತ್ತದೆ. ಕೆಲವರು ಶ್ರಮ, ಧೈರ್ಯ ಮತ್ತು ದೃಢನಿಶ್ಚಯದಿಂದ ಏಕಾಂಗಿಯಾಗಿ ಮುನ್ನಡೆಯುತ್ತಾರೆ ಎಂದು ಭಾಸವಾಗಬಹುದು. ಆದರೆ ಆ ಪಯಣದ ಹಿಂದೆ ಅಸಂಖ್ಯಾತರು ನೀಡಿದ ನೇರ ಅಥವಾ ಪರೋಕ್ಷ ಸಹಾಯಗಳು ಇದ್ದೇ ಇರುತ್ತವೆ ಎಂಬುದನ್ನು ಮರೆಯುವಂತಿಲ್ಲ.

ಮಾನವನು ಸಮುದಾಯದಲ್ಲಿ ಬದುಕುವ ಪ್ರಾಣಿ. ಇತರರೊಂದಿಗೆ ಬದುಕುವುದು, ಬೆಳೆಯುವುದೇ ಅವನ ಶಕ್ತಿಯ ಮೂಲವಾಗಿದೆ. ಮಕ್ಕಳು ಕುಟುಂಬದಲ್ಲಿ ಬೆಳೆದಾಗ ಅವರಿಗೆ ಮಾತು, ನಡತೆ, ಸಂಸ್ಕೃತಿ, ನೈತಿಕತೆ ಎಲ್ಲವೂ ಇತರರಿಂದಲೇ ದೊರಕುವ ಫಲ. ಈ ಬೆಳೆವಣಿಗೆಯಲ್ಲಿಯೇ ಅವರ ವೈಯಕ್ತಿಕ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಮಕ್ಕಳಿಂದ ಹಿರಿಯರ ತನಕ ಪ್ರತೀ ಹಂತದಲ್ಲೂ ಇತರರ ಬಾಳಿನ ಅನುಭವಗಳು, ಮಾರ್ಗದರ್ಶನಗಳು ಬಹು ಅಮೂಲ್ಯವಾಗಿರುತ್ತವೆ.

ವ್ಯಕ್ತಿಯೊಬ್ಬನು ಶಿಖರವನ್ನು ಏರುವ ಕನಸು ಕಾಣುತ್ತಾನೆ. ಆತನು ಶ್ರಮಿಸುತ್ತಾನೆ, ಪ್ರಯತ್ನಿಸುತ್ತಾನೆ. ಆದರೆ ದಾರಿಯ ಮಧ್ಯದಲ್ಲಿ ಕೆಲವೊಮ್ಮೆ ಕುಗ್ಗುತ್ತಾನೆ. ಇಂತಹ ಸಮಯದಲ್ಲಿ ಯಾರೋ ಒಂದಿಷ್ಟು ಬೆನ್ನುತಟ್ಟಿದರೂ, ಆ ಶಕ್ತಿಯು ಆತನನ್ನು ಮುಂದಕ್ಕೆ ನಡೆಸಬಹುದು. ಪ್ರಪಂಚದ ಮಹಾನ್ ವ್ಯಕ್ತಿಗಳ ಬದುಕನ್ನು ನೋಡುವುದಾದರೆ, ಅವರ ಯಶಸ್ಸು ಕೇವಲ ಅವರ ಶ್ರಮದಿಂದ ಮಾತ್ರವಲ್ಲ; ಅವರಿಗೆ ಸಿಕ್ಕಿದ ಮಾರ್ಗದರ್ಶನ, ಪ್ರೋತ್ಸಾಹ, ಮಾಡಿದ ಸಹಾಯಗಳಿಂದಲೇ ಆಗಿವೆ. ಒಂದು ಮರ ಬೆಳೆಯಲು ಹೇಗೆ ಅದಕ್ಕೆ ಗಾಳಿ, ನೀರು, ಬೆಳಕು, ಪೋಷಣೆ ಅಗತ್ಯವೋ ಹಾಗೆಯೇ ವೈಯಕ್ತಿಕ ಪ್ರಗತಿಯೂ ಕೂಡಾ ಇತರರ ಬೆಂಬಲವಿಲ್ಲದೆ ಸಾಧ್ಯವಿಲ್ಲ.

✍️ಡಾ. ಮೈತ್ರಿ ಭಟ್, ವಿಟ್ಲ

- Advertisement -

Related news

error: Content is protected !!