



ಗಾಂಧಿನಗರ: ಸಿಂಹವೊಂದು ರೈತನ ಮೇಲೆ ದಾಳಿ ಮಾಡಿ ಅರ್ಧ ಗಂಟೆಗಳ ಕಾಲ ಕಚ್ಚಿ ಹಿಡಿದ ಘಟನೆ ಗುಜರಾತ್‌ನ ಭಾವನಗರ ಜಿಲ್ಲೆಯ ಗರಾಜಿಯಾ ಗ್ರಾಮದಲ್ಲಿ ನಡೆದಿದೆ.
ಸಿಂಹ ದಾಳಿ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿಂಹವು ಆ ವ್ಯಕ್ತಿಯನ್ನು ನೆಲಕ್ಕೆ ತಳ್ಳಿ, ಆತನ ಕಾಲು ಮತ್ತು ಕೈಯನ್ನು ತನ್ನ ದವಡೆ ಹಾಗೂ ಪಂಜಗಳ ನಡುವೆ ಬಿಗಿಯಾಗಿ ಕಚ್ಚಿ ಹಿಡಿದುಕೊಂಡಿರುವ ಭಯಾನಕ ವಿಡಿಯೋ ಜನರನ್ನು ಬೆಚ್ಚಿಬೀಳಿಸಿದೆ. ವ್ಯಕ್ತಿ ಸಿಂಹದ ತಲೆ ಸವರುತ್ತರುವುದು ವಿಡಿಯೋದಲ್ಲಿ ಕಾಣಬಹುದು.
ಭಾವನಗರ ಜಿಲ್ಲೆಯ ಪಲಿತಾನ ತಾಲೂಕಿನ ಗರಾಜಿಯಾ ಗ್ರಾಮದ ನಿವಾಸಿ ಕಲುಭಾಯ್ ಬೋಘಾಯ್ ಪರ್ಮಾರ್ ಮನೆಯ ಬಳಿ ಹಸುಗಳಿಗೆ ಮೇವು ಹಾಕಲು ಹೋಗಿದ್ದಾಗ ಸಿಂಹ ದಾಳಿ ನಡೆಸಿದೆ. ಸುಮಾರು 30 ನಿಮಿಷಗಳ ಬಳಿಕ ಸಿಂಹ ಆತನನ್ನು ಬಿಟ್ಟು, ಕಟ್ಟಿಹಾಕಿದ್ದ ಹಸುವಿನ ಕಡೆಗೆ ತೆರಳಿದೆ. ಬಳಿಕ ಆತನನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿಯ ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಅಧಿಕಾರಿಗಳು ತಡವಾಗಿ ಬಂದಿದ್ದಾರೆ ಎಂದು ಕುಟುಂಬಸ್ಥರು ಹಾಗೂ ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಅರಣ್ಯ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.








