Monday, April 29, 2024
spot_imgspot_img
spot_imgspot_img

ಇಂದು ವಿಶ್ವ ಸಾಕ್ಷರತಾ ದಿನ: ನಮ್ಮವರನ್ನು ವ್ಯವಹಾರ ಜ್ಞಾನ ನೀಡಿ ಸಾಕ್ಷರರನ್ನಾಗಿಸಿ

- Advertisement -G L Acharya panikkar
- Advertisement -

ಕನಿಷ್ಠ ಓದು ಬರಹ ಒಂದು ದೇಶದ ಬೆಳವಣಿಗೆಯ ಸಂಕೇತ ಮತ್ತು ಅದು ದೇಹದಲ್ಲಿ ರಕ್ತ ಹರಿದಂತೆ ದೇಶದ ಬಲುದೊಡ್ಡ ಮತ್ತು ಆರೋಗ್ಯಕರ ಸಂಪತ್ತು.”ವಿದ್ಯೆ ಉಳ್ಳವನ ಮುಖವು ಮುದ್ದು ಬರುವಂತಿಕ್ಕು ವಿದ್ಯೆ ಇಲ್ಲದವನ ಬರಿ ಮುಖವು ಹಾಳೂರ ಹದ್ದಿನಂತಿಕ್ಕು ಸರ್ವಜ್ಞ “ಎನ್ನುತ್ತದೆ ವಚನ. ವ್ಯಕ್ತಿಯ ಜೀವನ ಅವನ ಅಕ್ಷರ ಜ್ಞಾನದ ಮೇಲೆಯೇ ನಿಂತಿದೆಯೇ ಎಂದರೆ ಖಂಡಿತ ಅಲ್ಲ. ಆದರೆ ಅವನು ಮಾಡುತ್ತಿರುವ ವ್ಯವಹಾರಕ್ಕೆ ಓದು ಬರಹ ಪೂರಕವಾಗಿ ಹಾದಿ ಸುಗಮವಾಗುತ್ತದೆ.

30 ವರುಷಗಳ ಹಿಂದೆ ಸಾಕ್ಷರತ ಆಂದೋಲನ ಜಾರಿಗೆ ಬಂದು 40 ರಿಂದ 60 ರ ವರೆಗಿನ ಇಳಿ ವಯಸ್ಸಿನವರನ್ನು ಸಂಧ್ಯಾ ತರಗತಿ ನಡೆಸಿ ಸಾಕ್ಷರರನ್ನಾಗಿಸೋ ಪ್ರಯತ್ನ ನಡೆಸಿತ್ತು ಸರಕಾರ. ಇದೊಂದು ಕ್ರಾಂತಿ ಕಾರಿ ಕಾರ್ಯಕ್ರಮ, ಮೂಲ ಉದ್ದೇಶ ಅನಕ್ಷರತೆಯಿಂದ ಮೋಸ ಹೋಗಬಾರದೆನ್ನುವುದು. ಪ್ರಸ್ತುತ 14ರ ವರೆಗಿನ ಬಾಲರಿಗೆ ಕಡ್ಡಾಯ ಶಿಕ್ಷಣವೂ ಒಂದು ಮುಂದಿನ ಹೆಜ್ಜೆಯಾಗಿದೆ.ಒಂದು ತಲೆಮಾರು ಹಿಂದೆ ಹೆಬ್ಬೆಟ್ಟಿನ ಬದುಕಿತ್ತು, ಜನ ಇತರರ ಮೇಲೆ ಆಗಾಧ ನಂಬಿಕೆ ಇಟ್ಟಿದ್ದರು.ಹಾಗೆಂದು ಆಗೊಮ್ಮೆ ಈಗೊಮ್ಮೆ ಮೋಸ ಹೋಗಿ ಎಲ್ಲವನ್ನು ಕಳೆದುಕೊಂಡ ಘಟನೆಗಳೂ ಸಂಭವಿಸಿವೆ. ಆದರೂ ಸಾಕ್ಷರರಾದ ಈ ತಲೆಮಾರಿನಲ್ಲಿ ವ್ಯಕ್ತಿತ್ವಗಳ ಮೇಲೆ ನಂಬಿಕೆ ಕಡಿಮೆಯಾಗಿ ದಾಖಲೆಗಳು ಮುಖ್ಯವಾಗಿಬಿಟ್ಟಿದೆ.

ಆಶ್ಚರ್ಯವೆಂದರೆ ಬರೆಯಲು, ಓದಲು ಒಂದಕ್ಷರದ ಅರಿವಿಲ್ಲದ ವಿದ್ವಾಂಸರು ಪುಸ್ತಕವಿಲ್ಲದೆ, ಮಸ್ತಕದಲ್ಲೇ ಇಟ್ಟಿದ್ದು ದಿನಗಟ್ಟಲೆ ಪುರಾಣ ಹೇಳುವವರಿದ್ದರು ಎನ್ನುವುದಕ್ಕೆ ಪುರಾತನ ಪುರಾವೆಗಳಿವೆ. ಅಲ್ಲಿ ಜನಪದದ, ಕಥೆಗಳನ್ನು ಸಾರುವ ಪುರಾಣಗಳ ಪಠಣ, ದೃಶ್ಯಜೋಡಣೆಗಳ ಪ್ರಭಾವ ಹೆಚ್ಚಿತ್ತು ಎನ್ನೋಣ. ಕಾನೂನು ಕಟ್ಟಳೆಗಳು ಕಟ್ಟೆಗಳಲ್ಲೇ ದಿನ ಬೆಳಗಾದರೆ ಮುಗಿಯುತಿದ್ದ ಕಲ್ಪನೆ ಇನ್ನೂ ಹಸಿರಾಗಿಲ್ಲವೇ? ಇವೆಲ್ಲವೂ ಜನರು ಇಟ್ಟಿರುವ ವಿಶ್ವಾಸ, ಭಕ್ತಿ, ನಂಬಿಕೆಗಳ ಮೇಲೆ ನಿಂತಿದ್ದವು ಎನ್ನುವುದೇ ಉತ್ತರ. ಈಗೀಗ ಎಲ್ಲೋ ಪುಸ್ತಕದಲ್ಲಿದೆ ಎನ್ನುವುದರಲ್ಲೇ ಮಸ್ತಕದಲ್ಲಿಡುವುದು ಕಡಿಮೆಯಾಗಿದೆ, ನೆನಪು ಹೀನತೆ ಹೆಚ್ಚಾಗಿದೆ. ಪ್ರಸ್ತುತ ವಿದ್ಯಾಕ್ಷೇತ್ರದಲ್ಲೂ ಅದನ್ನೇ ಕಾಣುತ್ತೇವೆ. ಓದು, ಬರಹ ಮತ್ತು ಲೆಕ್ಕಕ್ಕೆ ಪೂರ್ಣ ಡಿಜಿಟಲ್ ಯಂತ್ರ ಕೆಲಸ ಮಾಡೋದರ ಪರಿಣಾಮ ಯಾವುದೂ ನೆನಪಿನೊಳಗಿಲ್ಲ ಮತ್ತು ಅಷ್ಟೊಂದು ದೊಡ್ಡ ಜವಾಬ್ದಾರಿಗೆ ಹೋಗುವ ಪ್ರಮೇಯವು ಇಲ್ಲವಾಗಿದೆ.ಹೀಗೆ ಮುಂದುವರಿದರೆ ಮುಂದೊಂದು ದಿನ ನಮ್ಮ ಮೆದುಳಿನ ಮೆಮೊರಿ ಕೌಂಟರ್ ಹುಟ್ಟಿನಿಂದ ಸಾಯೋವರೆಗೆ ನಿಷ್ಕ್ರಿಯವಾಗ ತೊಡಗಬಹುದೇ? ಹೆದರಿಕೆಯಿಲ್ಲ ಬಿಡಿ, ಮೆಮೊರಿ ಚಿಪ್ ಜೋಡಣೆ ಬರಬಹುದೊ ಏನೋ?

ಈ ಎಲ್ಲ ಸೌಲಭ್ಯತೆಗಳು ನಮ್ಮ ವ್ಯಕ್ತಿಗತ ತಿಳುವಳಿಕೆ, ಮತ್ತು ಸರಳ ನಡೆಗಳ ಮೇಲೆ ಪರಿಣಾಮ ಬೀರಬಹುದೇ ಎನ್ನುವ ಆತಂಕವಿದೆ. ಬೆರಳಲ್ಲಿ ಕೊಯ್ಯುವುದಕ್ಕೆ ಆಯುಧ ಹಿಡಿಯುವ ಕಾಲ ಬಂದಾಗಿದೆ. ಇದೇ ತೀವ್ರಗತಿಯ ಅಭಿವೃದ್ದಿ ಮುಂದೊಂದು ತಲೆಮಾರಿಗೆ ಸುಸ್ಥಿರತೆ ನೀಡುವುದರ ಬದಲು ಅಭದ್ರತೆ ಒದಗಿಸಬಹುದೇ ಎನ್ನುವುದೇ ಪ್ರಶ್ನೆ. ಮಗುವನ್ನು ಬೆಳೆಸಿ ದೊಡ್ಡವನಾಗಿಸಿ, ಉದ್ಯೋಗ ಕೊಡಿಸಿ, ಮದುವೆ ಮಾಡಿಸಿ, ಅವನಿಗೆ ಮಗುವಾಗುವಲ್ಲಿವರೆಗೂ ಹೆತ್ತವರ ಸಹಾಯ ಯಾಚಿಸುವ ಮಕ್ಕಳ ಮೂಲ ಬೆಳವಣಿಗೆ ಕುಂಠಿತವಾಗುವ ಹಿನ್ನೆಲೆಯಲ್ಲಿ ಮುಖ್ಯವಾಗಿ ನಮ್ಮ ಮಕ್ಕಳಿಗೆ ಮೂಲ ವ್ಯವಹಾರ ನಡೆಸುವ ಜ್ಞಾನದಲ್ಲಿ ಸಾಕ್ಷರರನ್ನಾಗಿಸುವ ಅವಶ್ಯಕತೆ ಇದೆ. ಇಲ್ಲವಾದರೆ ಅತಿ ಸಣ್ಣ ಸಂಕಷ್ಟ ಸಹಿಸಲಾಗದೆ ಆತ್ಮಹತ್ಯೆಯಂತಹ ಹಾನಿಗಳಿಗೆ ನಾವೇ ಹೊಣೆಗಾರರಾಗುತ್ತೇವೆ.

ಪ್ರತಿ ವರ್ಷ ಸೆಪ್ಟೆಂಬರ್ 8 ರಂದು ವಿಶ್ವ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಸಾಕ್ಷರತೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ ಮತ್ತು ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತದೆ. UNESCO (ಯುನೈಟೆಡ್ ನೇಷನ್ಸ್ ಎಜುಕೇಶನಲ್, ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಸೇಶನ್) 1964 ರಲ್ಲಿ ಈ ದಿನವನ್ನು ವಿಶ್ವ ಸಾಕ್ಷಾರತಾ ದಿನವೆಂದು ಘೋಷಿಸಿತು.

ಯುನೆಸ್ಕೋ ವಿವಿಧ ಸಾಕ್ಷರತಾ ಕಾರ್ಯಕ್ರಮಗಳ ಮೂಲಕ ಎಲ್ಲರಿಗೂ ಸಾಕ್ಷರತೆಯನ್ನು ಉತ್ತೇಜಿಸುತ್ತದೆ ಮತ್ತು ಸಾಕ್ಷರತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಮಾನವ ಹಕ್ಕುಗಳ ಜೊತೆಗೆ ಇದು ಸಬಲೀಕರಣದ ಸಾಧನವಾಗಿದೆ ಮತ್ತು ಸಾಮಾಜಿಕ ಹಾಗೂ ಮಾನವ ಯೋಗಕ್ಷೇಮವನ್ನು ಸುಧಾರಿಸುವ ಮಾರ್ಗವಾಗಿದೆ.

ನಮ್ಮ ಶೈಕ್ಷಣಿಕ ಅಧ್ಯಯನಗಳಿಗೆ ಸಾಕ್ಷರತೆ ಅತ್ಯಗತ್ಯ. ಮೂಲಭೂತ ಶಿಕ್ಷಣದಲ್ಲಿ ಸಾಕ್ಷರತೆಯ ಮಹತ್ವವನ್ನು ಅತಿಯಾಗಿ ಹೇಳಲಾಗುವುದಿಲ್ಲ. ಶಿಕ್ಷಣವು ಸಾಕ್ಷರತೆಯನ್ನು ಆಧರಿಸಿದೆ, ಒಬ್ಬ ವಿದ್ಯಾವಂತ ವ್ಯಕ್ತಿಯು ಬಡತನವನ್ನು ನಿರ್ಮೂಲನೆ ಮಾಡುವುದು, ಮಕ್ಕಳ ಮರಣವನ್ನು ಕಡಿಮೆ ಮಾಡುವುದು, ಜನಸಂಖ್ಯೆಯ ಬೆಳವಣಿಗೆಯನ್ನು ತಡೆಯುವುದು ಇತ್ಯಾದಿಗಳನ್ನು ತಿಳಿದಿರುತ್ತಾನೆ. ಹಸಿವು, ಲಿಂಗ ಅಸಮಾನತೆ ಮತ್ತು ಅನಿಯಂತ್ರಿತ ಜನಸಂಖ್ಯೆಯ ಬೆಳವಣಿಗೆ ಸೇರಿದಂತೆ ವಿವಿಧ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು UNESCO ಈ ದಿನವನ್ನು ಆಯ್ಕೆ ಮಾಡಿದೆ.

ಈ ವಿಶ್ವ ಸಾಕ್ಷರತಾ ದಿನವನ್ನು ಆಚರಿಸುವ ಪರಿಣಾಮವಾಗಿ ಜನರು ವ್ಯಕ್ತಿಗಳಾಗಿ ಮತ್ತು ಸಮಾಜವಾಗಿ ತಮ್ಮ ಹಕ್ಕುಗಳ ಬಗ್ಗೆ ಹೆಚ್ಚು ಜಾಗೃತರಾಗುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಬದುಕಲು ಆಹಾರದಷ್ಟೇ ಅವಶ್ಯಕ ಈ ಸಾಕ್ಷರತೆ. ಆದ್ದರಿಂದ ಇಂದು ಈ ದಿನವನ್ನು ಸಕಾರಾತ್ಮಕ ಮನೋಭಾವದಿಂದ ಆಚರಿಸೋಣ. ಈ ದಿನವನ್ನು ಆಚರಿಸಲು ಪುಸ್ತಕವನ್ನು ದಾನ ಮಾಡುವುದು, ಲೈಬ್ರರಿಗೆ ಭೇಟಿ ನೀಡುವುದು ಅಥವಾ ನತದೃಷ್ಟ ಮಗುವಿಗೆ ಕಲಿಸುವುದನ್ನು ಪ್ರಯತ್ನಿಸೋಣ. ನಾವು ಕಲಿಯುತ್ತೇವೆ, ಕಲಿಸುತ್ತೇವೆ, ಪ್ರೇರೇಪಿಸುತ್ತೇವೆ ಮತ್ತು ನಮ್ಮ ಭವಿಷ್ಯವು ಜ್ಞಾನ ಮತ್ತು ಯಶಸ್ಸಿನಿಂದ ತುಂಬಿರುತ್ತದೆ.

ನಾವು ನೀವು ಸೇರಿ ಜೀವನ ಪಾಠದಲ್ಲಿ ಸಾಕ್ಷರರನ್ನಾಗಿಸುವ ಪಣ ತೊಡೋಣ.

-ರಾಧಾಕೃಷ್ಣ ಎರುಂಬು
astr
- Advertisement -

Related news

error: Content is protected !!