Tuesday, April 30, 2024
spot_imgspot_img
spot_imgspot_img

“ಸತ್ಯದ ಅರಿವೆಂಬ ನಿಲ್ದಾಣ”

- Advertisement -G L Acharya panikkar
- Advertisement -

ಮಲ್ಲಿಕಾ ಜೆ ರೈ ಗುಂಡ್ಯಡ್ಕ
ಅಂಕಣಕಾರರು

ಗ ತಾನೆ ನಸುನಕ್ಕಂತೆ ತೋರಿದ ಆ ಸೂರ್ಯಬಿಂಬ ಬೆಳಗಿನ ಉದಯದ್ದಲ್ಲ. ಬದಲಿಗೆ ಸಂಜೆರಾಗದ ಸೋಜಿಗವೇ ಹೌದು. ಮೈಮರೆತೇ ಹೋಗುವ ಹಾಗೇನೂ ಅಲ್ಲವಾದರೂ ದಿನ ದಿನವು ಬಂದಾಗಲೂ ಮಾಸದ ಉತ್ಸಾಹ. ದಿನವಿಡೀ ದುಡಿದರೂ ಆಗದ ಆಯಾಸ ಬಳಲಿಕೆ. ಮನುಷ್ಯ ಮಾತ್ರವೇ ತನ್ನ ಸೀಮಿತ ವ್ಯಾಪ್ತಿಯಲ್ಲಿ ಯಾವುದೇ ಕಾರ್ಯಕ್ಷೇತ್ರದಲ್ಲೂ ಹೇಳುವ ಮಾತು ಪುರುಸೊತ್ತೆ ಸಿಗಲಿಲ್ಲವೆಂದು. ಮಾಡುವ ಉತ್ಸಾಹ ಮೊದಲು ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳಬೇಕು. ಬೇರೆಯವರ ಮುಖ ಅಥವಾ ಕೈಯನ್ನು ನೋಡಿ ಕಾರ್ಯ ಮಾಡುವ ಸಾಹಸ ಪಡಬಾರದು.

ಹೊತ್ತು ಹೋಗುವುದೇ ತಿಳಿಯದಂತಹ ಪಯಣವು ಎಂದೆಂದೂ ಆಗಿರಬೇಕು. ಆಗ ದಿನದಿನವೂ ಹೊಸದಾಗಿ ಉದಯಿಸುವ ನೇಸರನಂತೆ ಲಕ ಲಕ ಹೊಳೆಯುವುದು ಸಾಧ್ಯವಾಗುತ್ತದೆ. ಹಾಗಾಗಿ ಅದು ಚಂದ್ರನ ಬೆಳದಿಂಗಳು ಕೂಡಾ ಸವಿಯುವಷ್ಟರ ಮಟ್ಟಿಗೆ ಪ್ರೇರಣೆಯಾಗುತ್ತದೆ. ಅದಕ್ಕೆ ದಿನವೂ ಬೆಟ್ಟದಷ್ಟು ಕಾರ್ಯಗಳು ಕಾಲಡಿಯಲ್ಲಿ ಬಿದ್ದುಕೊಂಡಿರಬೇಕು. ಯೋಚಿಸುವಷ್ಟು ಸಮಯ ಕೂಡಾ ಇರಬಾರದು. ಆ ಕಾರ್ಯಗಳು ಸಮಯದ ಹಾಗೆ ತನ್ನಿಂತಾನೇ ಸಾಗುತ್ತಾ ಹೋಗುತ್ತದೆ. ಮನಸ್ಸಿಗೆ ನೆಮ್ಮದಿ ದೊರಕಿಸುತ್ತದೆ.

ಪರೀಕ್ಷೆಯಲ್ಲಿ ಪ್ರಶ್ನೆಗೆ ಉತ್ತರ ಸಿಕ್ಕಂತೆ. ಸಮಸ್ಯೆಗಳೆಲ್ಲ ಪರಿಹಾರವಾದಂತೆ. ಆಲೋಚನೆ ಮಾಡುತ್ತ ಕಾಲ ಹರಣ ಮಾಡುವ ಮನಸ್ಸಿಗೆ ಜಡತೆ ಆವರಿಸಬಹುದು. ಹರಿಯುವ ನೀರು ನಿರಂತರ ಸಾಗುವ ರೀತಿಯಲ್ಲಿ ಮನಸ್ಸು ಸಾಗುತ್ತಿದ್ದರೆ ಕೆಟ್ಟ ಕಾರ್ಯಗಳು ಎಂದೂ ಉದ್ಭವಿಸಲಾರದು. ನಿತ್ಯವೂ ಇಂತದೇ ಕಾರ್ಯವೆಂದು ಮಾತ್ರ ಭಾವಿಸಬಾರದು‌. ಮನೆಯೊಳಗೆ ಅಥವಾ ಹೊರಗೆ ಯಾವುದೇ ಕಾರ್ಯಗಳಿರಲಿ ಕೈ ಕಾಲು ಸದೃಢವಾಗಿರಿಸುವಷ್ಟು ವ್ಯಾಯಾಮದ ಅಗತ್ಯ ಬಾರದಂತೆ ಕಾರ್ಯ ಚಲನೆಯನ್ನು ಪ್ರೀತಿಸಬೇಕು‌‌. ಅರ್ಥಾತ್ ಬೇರೆಯವರು ಹೇಳಿ ಮಾತ್ರ ಮಾಡುವುದಲ್ಲ. ಅವರವರ ಮನಃಪೂರ್ವಕ ಮಾಡಿದರೆ ಪ್ರೀತಿ ವಿಶ್ವಾಸ ಒಲಿಯುತ್ತದೆ. ಸಹಕಾರದ ಅರ್ಥ ತಿಳಿಯುತ್ತದೆ.

ಹೇಳಿ ಕೊಟ್ಟ ಮಾತು ಕೆಲವೊಮ್ಮೆ ಮರೆತು ಹೋಗಿ ಹೇಳಲಾಗದ ಅನಿರೀಕ್ಷಿತತೆ ಒದಗುವ ಸಾಧ್ಯತೆಯೂ ಬರಬಹುದು. ಅಂದರೆ ಒಳಿತು ಅಥವಾ ಕೆಟ್ಟದ್ದು. ಮನದೊಳಗಿನ ಭಾವನೆ ಹೇಗೆ ಬರುವುದೋ ಅದನ್ನು ಹೊಂದಿಕೊಂಡು ಕಾರ್ಯಗಳ ಪರಿಚಯವಾಗುತ್ತದೆ. ಉದಾಹರಣೆಗೆ ಹೇಳುವುದಾದರೆ ಯಾರೋ ಒಬ್ಬರು ಮಾಡಿದ ಉಪಕಾರಕ್ಕೆ ಅವರಿಗೆ ಉಡುಗೊರೆಯೆಂದು ದನವನ್ನು ನೀಡಿದರೆಂದಾದರೆ ಆ ಬಳಿಕ ಹಾಲು ತುಪ್ಪ ಯಥೇಚ್ಛವಾಗಿ ಬಳಸಬಹುದೆಂಬ ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.

ಆದರೆ ಕೊಟ್ಟವನಿಗೆ ತಾನು ಮತ್ತೆ ಆ ದನವನ್ನು ನೀಡಿ ಕೆಟ್ಟೆನೆಂದು ಭಾವಿಸಿ, ಕೆಲದಿನಗಳ ಬಳಿಕ ಬಂದು ಅದೇ ದನವನ್ನು ವಾಪಾಸು ಕೇಳುತ್ತಾನೆ. ಆಗ ತೆಗೆದುಕೊಂಡವ ಯಾವುದೇ ವಿರೋಧ ಮಾತಾಡದೇ ದನವನ್ನು ಸಂತೋಷದಿಂದ ವಾಪಾಸು ಅದರ ಮೂಲ ಒಡೆಯನಿಗೇ ನೀಡುತ್ತಾನೆ. ಇದನ್ನು ಗಮನಿಸಿದ ಅತನ ಹಿತವರ್ಯರು ಪ್ರಶ್ನೆ ಮಾಡುತ್ತಾರೆ. ಆದರೆ ಆತ ಹೇಳುವ ಮಾತು ಸೆಗಣಿಯನ್ನು ಬೆರಣಿ ಮಾಡಿ ತಟ್ಟುವ ಕೆಲಸ ಇನ್ನು ಮಾಡಬೇಕಿಲ್ಲ ಎನ್ನುವ ಧನಾತ್ಮಕ ಮನೋಭಾವವನ್ನೇ ಹೊಂದಿ ನಿರ್ಮಮತ್ವ ಭಾವ ತಾಳುತ್ತಾನೆ.ಹಾಗಾಗಿ ಸುಖ ಬಂದಾಗ ಅತೀ ಸಂತೋಷ ಪಡದೇ, ಕಳೆದು ಹೋದಾಗ ದುಃಖಗೊಳ್ಳದೇ ಸಮತತ್ವ ಭಾವವನ್ನು ಎಂದೆಂದಿಗೂ ಕಾಪಾಡಿಕೊಳ್ಳಬೇಕು. ಆಗಲೇ ಮನದೊಳಗೆ ಭಗವಂತನ ಸಾನ್ನಿಧ್ಯ ಆವಾಹಿಸಲು ಸಾಧ್ಯವಾಗುತ್ತದೆ.

ಜೀವನದ ಈ ಪಯಣ ಹೀಗೆ ಮುಗಿದು ಹೋಗುವುದಲ್ಲ. ಬದಲಿಗೆ ಅನುಭವಿಸುತ್ತಾ ಸಂಚರಿಸುವ ಅನುಭವಗಳ ಕ್ಷೇತ್ರವೂ ಹೌದು. ಒಂದು ಕಡೆಯಿಂದ ಇನ್ನೊಂದು ಕಡೆ ಬಸ್ಸು , ರೈಲುಗಳು ಹೇಗೆ ದಿನವೂ ಸಂಚರಿಸುತ್ತದೋ ಅದೇ ರೀತಿ ಮಾನವ ಸಂಚರಿಸುತ್ತಿರುತ್ತಾನೆ. ಅದು ಅನಿವಾರ್ಯ ಕೂಡ. ಆದರೆ ಬಸ್ಸು, ರೈಲುಗಳಿಗೆ ನಿಗದಿತ ದಾರಿಗಳ ಮೂಲಕ ನಿಲ್ದಾಣಕ್ಕೆ ಚಲಿಸಬೇಕೆಂಬ ಶರತ್ತುಗಳಿರುತ್ತವೆ.

ಹಾಗಾಗಿ ಯಂತ್ರಗಳಂತೆ ಅವುಗಳ ಕಾರ್ಯಕ್ಷೇತ್ರ ಅಷ್ಟಕ್ಕೇ ಸೀಮಿತವಾಗಿರುತ್ತವೆ. ಆದರೆ ಮನುಜನಿಗೆ ಆ ತೆರನಾದ ವ್ಯಾಪ್ತಿಯ ಪರಿಧಿ ಇಲ್ಲದಿದ್ದರೂ ಬದುಕಿನ ಬಂಡಿ ಚಲಿಸಲು ಯಾವುದಾದರೊಂದು ನಿಗದಿತ ಗುರಿ(ದಾರಿ) ಯನ್ನು ನಿರ್ಧರಿಸಿ ಪಾಲಿಸಬೇಕಾಗುತ್ತದೆ. ಅದು ಇಂಥದೇ ಮಾರ್ಗ ಎಂದು ಹೇಳುವ ಹಾಗಿರುವುದಿಲ್ಲ. ಹೊಟ್ಟೆ ಹೊರೆಯಲು ಇಂತಹುದೇ ಉದ್ಯೋಗ ಮಾಡಬೇಕೆಂಬ ನಿಯಮವೂ ಇರುವುದಿಲ್ಲ. ಅವರವರ ಪಾಲಿಗೆ ಅವರವರ ಪಂಚಾಮೃತವೇ ಸರಿ.

ಧ್ಯಾನದಿಂದ ದೇವರನ್ನು ನೆನೆದಾಗ ಒದಗುವ ಮಾನಸಿಕ ಸಂತೃಪ್ತಿ ಕಾರ್ಯವ್ಯಾಪ್ತಿಯನ್ನು ಅವಲಂಬಿಸಿರಬಹುದು ಇಲ್ಲದೆಯೂ ಇರಬಹುದು. ಜೀವನದ ಜೋಕಾಲಿಯನ್ನು ತೂಗುವ ಕಾಣದ ಕೈಗಳಿಗೆ, ಮನದೊಳಗೆ ಯಥೇಚ್ಛ ಜಾಗವಿರಿಸಿ ಕೊಳ್ಳಬೇಕು. ಬಾಹ್ಯದ ಅರಿವಿನ ವಾತಾವರಣ ತಿಳಿಯಾಗಿರಿಸಲು ಇದು ಸೂಕ್ಷ್ಮವಾದ ರಹದಾರಿಯೂ ಹೌದು. ಹೇಗೇಗೋ ಬದುಕು ನಡೆಸುವ ಬದಲು ಸರಳವಾಗಿ ಬದುಕುವ ರೀತಿ ಅತ್ಯಂತ ಶ್ರೇಷ್ಠವೇ ಹೌದು.

ಸರಳ ಜೀವನ ಶೈಲಿಯನ್ನು ಕಂಡಾಗ ಬದುಕು ಸಹಜವಾಗಿಯೇ ಮಾಗುತ್ತದೆ. ಬಟ್ಟೆಯು ಹಲವಾರು ಬಣ್ಣಗಳಿಂದ ಕೂಡಿದ್ದು ಆಯ್ಕೆಯ ಸರದಿ ಮನಸ್ಸಿಗೆ ಸಂಬಂಧಪಡುವಂತೆ ಈ ಮಾನವ ಜನ್ಮವು ಅತ್ಯಂತ ಶ್ರೇಷ್ಟವಾಗಿದ್ದು ಮನವೆಂಬ ಬಟ್ಟಲಲ್ಲಿ ದೇವರ ಸ್ಮರಣೆಯೊಂದಿಗೆ ಸದಾ ಮಿನುಗುತ್ತಿರಬೇಕು. ಆಕಾಶದಲ್ಲಿ ನಕ್ಷತ್ರಗಳು ಹುಣ್ಣಿಮೆಯ ದಿವಸ ನೋಡುವಾಗ ಫಳ ಫಳ ಹೊಳೆಯುತ್ತ ನೋಡುಗರಿಗೆ ಮನಸ್ಸಿಗೆ ಮುದ ನೀಡುತ್ತದೆ. ನೋಟದ ತುಂಬಾ ಪೌರಾಣಿಕ ಪ್ರಸಂಗಗಳು ಆಗ ತಾನೇ ನಡೆದು ಹೋದ ರೀತಿಯಲ್ಲಿ ಗೋಚರಿಸಲ್ಪಡುವಂತೆ ತೋರುತ್ತದೆ. ಧ್ರುವ ನಕ್ಷತ್ರ ಮಿನುಗುವ ಹಾಗೆ ದೇವರ ಧ್ಯಾನದೊಳಗೆ ಸಿಲುಕುವ ಮನಸ್ಸು ಸದಾ ಮಿನುಗುತ್ತಿರುತ್ತದೆ. ಅಂತರಂಗದ ಮೃದಂಗ ಬಾರಿಸುವ ತನಕ ಆ ಬೆಳಕನ್ನು ಸದಾ ಕಾಣುತ್ತಿರಲಿ. ಹೃನ್ಮನಸು ಸದಾ ಹೂವಿನಂತೆ ಅರಳಿ ಬೆಳಗಿ ಬಾಳುತ್ತಿರಲಿ.

ದೇವರ ಎದುರು ಮನುಜರೆಲ್ಲ ಸಮಾನರು. ಅವರ ಬಾಹ್ಯ ಜೀವನದ ಸ್ಥಿತಿಗತಿಗಳು ಹೊರಗಿನ ತೋರಿಕೆಗಷ್ಟೆ . ಅಂತರಂಗದ ಭಾವಗತಿ ಮುಖ್ಯವೆಂದರೆ ತಪ್ಪಾಗಲಾರದು. ಲೌಕಿಕ ಜನರು ಬಾಹ್ಯದ ಗುರುತಿಗೆ ಗುರುತರ ಮಾನ್ಯತೆ ಪಡೆಯುವುದು ಒಂದು ರೀತಿಯಲ್ಲಿ ಕನ್ನಡಿಯೆದುರು ನಿಂತ ಹಾಗಾಗಿದೆ. ಪಾರಮಾರ್ಥಿಕ ದೃಷ್ಟಿಯಿಂದ ನೋಡುವುದಾದರೆ ಕಣ್ಣಿದ್ದೂ ಕುರುಡರ ಸ್ಥಿತಿಯಲ್ಲಿ ಇಂದಿನ ಸಮಾಜ ಎತ್ತೆತ್ತಲೋ ಸಾಗುತ್ತಿದೆ. ಮನಸ್ಸು ಹೊರಗಿನ ಪ್ಲಾಸ್ಟಿಕ್‌ಗಳ ಆಕರ್ಷಣೆಗೆ ಮಾರುಹೋಗಿ ಏನೇನೋ ಅನವಶ್ಯಕ ವಸ್ತುಗಳನ್ನು ಖರೀದಿಸುವ ಸಂತೆಯೊಳಗೆ ಸೇರಿಕೊಂಡಿದೆ. ನಿಜ ಸೌಂದರ್ಯ ಲಹರಿಯ ಭಾವದೊಳಗೆ ಬರಿದೇ ಹಳೆಯ ಬಟ್ಟೆಯ ಚೀಲ ನೆಲೆನಿಂತಿದೆ. ಹರಿದು ಹೋಗುವ ಮುನ್ನ “ಹರಿ”ಯ ಧ್ಯಾನದಲ್ಲಿ ನೆಲೆನಿಂತು ಶುಭ್ರತೆಯ “ಹರಿ”ವು ಹೆಚ್ಚುತ್ತಿರಲಿ. ಸತ್ಯದ ಅರಿವಿನ ನಿಲ್ದಾಣ ಸದಾ ಕಾಯುತ್ತಿರಲಿ.

ಮಲ್ಲಿಕಾ ಜೆ ರೈ ಗುಂಡ್ಯಡ್ಕ
ಅಂಕಣಕಾರರು
[email protected]

- Advertisement -

Related news

error: Content is protected !!