Monday, May 6, 2024
spot_imgspot_img
spot_imgspot_img

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಗೆ ಹೃದಯಾಘಾತ; ತುರ್ತು ನೆರವು

- Advertisement -G L Acharya panikkar
- Advertisement -

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ವೇಳೆ ಕಡಲಿನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಮೀನುಗಾರರೊಬ್ಬರಿಗೆ ಸಮುದ್ರದಲ್ಲೇ ಪ್ರಥಮ ಚಿಕಿತ್ಸೆ ಒದಗಿಸಿ, ತಕ್ಷಣವೇ ನವಮಂಗಳೂರು ಬಂದರಿಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ಕರಾವಳಿ ರಕ್ಷಣಾ ಪಡೆ ನೆರವಾಗಿದೆ.

“ಬೇಬಿ ಮೇರಿ-4′ ಮೀನುಗಾರಿಕಾ ದೋಣಿಯಲ್ಲಿ ಮೀನುಗಾರಿಕೆಗೆ ಕಡಲಿಗೆ ತೆರಳಿದ್ದ ವಸಂತ ಅವರು ಪಣಂಬೂರು ತೀರದಿಂದ ಸುಮಾರು 36 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದ್ದರು. ಮಂಗಳವಾರ ಮಧ್ಯಾಹ್ನ 3.20ರ ಸುಮಾರಿಗೆ ಅವರಿಗೆ ಎದೆ ನೋವು ಹಾಗೂ ಉಸಿರಾಟದ ತೀವ್ರ ಸಮಸ್ಯೆ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಇನ್ನೊಂದು ಮೀನುಗಾರಿಕಾ ದೋಣಿಯ (ಸುಲ್ತಾನ) ಮೀನುಗಾರರು ಈ ಬಗ್ಗೆ ಕರ್ನಾಟಕದ ಕರಾವಳಿ ರಕ್ಷಣಾ ಪಡೆಯ ಜಿಲ್ಲಾ ಕೇಂದ್ರಕ್ಕೆ ಮಾಹಿತಿ ನೀಡಿ ತುರ್ತು ನೆರವು ಕೋರಿದ್ದರು.

ಇದಕ್ಕೆ ಸ್ಪಂದಿಸಿದ ಕರಾವಳಿ ರಕ್ಷಣಾ ಪಡೆಯು ಸಾಗರ ರಕ್ಷಣಾ ಉಪಕೇಂದ್ರವನ್ನು (ಎಂಆರ್‌ಎಸ್‌ಸಿ) ಸನ್ನದ್ಧಗೊಳಿಸಿ, ತನ್ನೆಲ್ಲ ನೌಕೆಗಳಿಗೆ ತುರ್ತು ರಕ್ಷಣೆಯ ಅಗತ್ಯದ ಕುರಿತ ಸಂದೇಶ ರವಾನಿಸಿತು. ಈ ದೋಣಿಗೆ ಸಮೀಪದಲ್ಲಿದ್ದ ಕರಾವಳಿ ರಕ್ಷಣಾ ತಡೆಯ ಇಂಟರ್‌ಸೆಪ್ಟ‌ ದೋಣಿ ಸಿ- 446, ಹೃದಯಾಘಾತದ ಲಕ್ಷಣಗಳನ್ನು ಎದುರಿಸುತ್ತಿದ್ದ ಮೀನುಗಾರ ವಸಂತ ಅವರಿದ್ದ ದೋಣಿಯತ್ತ ಧಾವಿಸಿತು. ಇಂಟರ್ ಸೆಪ್ಟ‌ ದೋಣಿಯ ಸಿಬ್ಬಂದಿ ವಸಂತ ಅವರ ಆರೋಗ್ಯ ತಪಾಸಣೆ ನಡೆಸಿ, ಪ್ರಥಮ ಚಿಕಿತ್ಸೆ ಒದಗಿಸಿದರು. ಹೆಚ್ಚಿನ ಚಿಕಿತ್ಸೆ ಸಲುವಾಗಿ ಆ ಮೀನುಗಾರರನ್ನು ಅದೇ ದೋಣಿಯಲ್ಲಿ ಪಣಂಬೂರಿನ ನವಮಂಗಳೂರು ಬಂದರಿನ ದಕ್ಕೆಗೆ ಕರೆತಂದರು.

ಮೀನುಗಾರಿಕಾ ಇಲಾಖೆ ಹಾಗೂ ನವಮಂಗಳೂರು ಬಂದರು ಪ್ರಾಧಿಕಾರದ ನೆರವಿನಿಂದ ಬಂದರಿನ ಜೆಟ್ಟಿಯಲ್ಲಿ ವಸಂತ ಅವರಿಗೆ ತುರ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲಾಯಿತು. ಬಳಿಕ ಮೀನುಗಾರಿಕಾ ದೋಣಿ ಮಾಲೀಕರನ್ನು ಸಂಪರ್ಕಿಸಿದ ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯನ್ನು ನಗರದ ಬೆಂದೂರುವೆಲ್‌ನ ಆಸ್ಪತ್ರೆಗೆ ರವಾನಿಸಿ ಹೆಚ್ಚಿನ ವೈದ್ಯಕೀಯ ನೆರವು ಒದಗಿಸುವುದಕ್ಕೆ ವ್ಯವಸ್ಥೆ ಕಲ್ಪಿಸಿತು.

- Advertisement -

Related news

error: Content is protected !!