


ಮಂಗಳೂರು: ಚಲಿಸುತ್ತಿದ್ದ ರೈಲನ್ನು ಹತ್ತುವ ವೇಳೆ ಹಳಿಗೆ ಬಿದ್ದ ವೃದ್ಧರೊಬ್ಬರನ್ನು ರೈಲ್ವೆ ಪಾಯಿಂಟ್ಸ್ಮ್ಯಾನ್ ಸಮಯಪ್ರಜ್ಞೆಯಿಂದ ರಕ್ಷಿಸಿ, ಸಂಭವನೀಯ ಭೀಕರ ಅಪಘಾತವನ್ನು ತಪ್ಪಿಸಿದ ಘಟನೆ ಸೋಮವಾರ ಸುರತ್ಕಲ್ ರೈಲು ನಿಲ್ದಾಣದಲ್ಲಿ ನಡೆದಿದೆ.
ಮುಂಬೈನಿಂದ ಮಂಗಳೂರು ಕಡೆಗೆ ಬರುತ್ತಿದ್ದ ರೈಲಿನಲ್ಲಿ ಈ ಘಟನೆ ಸಂಭವಿಸಿದ್ದು, ರೈಲು ಸುರತ್ಕಲ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ವೃದ್ಧ ಪ್ರಯಾಣಿಕರೊಬ್ಬರು ಕೆಳಗಿಳಿದು ನಿಲ್ದಾಣದಲ್ಲಿದ್ದ ಅಂಗಡಿಗೆ ತೆರಳಿದ್ದರು. ಅವರು ವಾಪಸ್ ಬರುವಷ್ಟರಲ್ಲಿ ರೈಲು ಚಲಿಸಲು ಆರಂಭಿಸಿತ್ತು.
ಅಂಗಡಿಯಿಂದ ಪಡೆದಿದ್ದ ವಸ್ತುವೊಂದನ್ನು ಅಲ್ಲಿಯೇ ಬಿಟ್ಟು ಬಂದಿದ್ದ ಅವರು, ಅದನ್ನು ತರಲು ಅವಸರದಲ್ಲಿ ಮತ್ತೆ ಚಲಿಸುತ್ತಿದ್ದ ರೈಲನ್ನು ಹತ್ತಲು ಮುಂದಾಗಿದ್ದಾರೆ. ಈ ವೇಳೆ ಆಯತಪ್ಪಿ ಹಳಿಗೆ ಬಿದ್ದಿದ್ದಾರೆ. ರೈಲಿನ ಚಕ್ರಗಳಡಿ ಸಿಲುಕುವುದರಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಘಟನೆ ನಡೆದ ವೇಳೆ ಕರ್ತವ್ಯದಲ್ಲಿದ್ದ ಪಾಯಿಂಟ್ಸ್ಮ್ಯಾನ್ ಸಂದೀಪ್ ನಾಯಕ್ ಅವರು ಇದನ್ನು ಗಮನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅವರು, ಹಳಿಗೆ ಬಿದ್ದಿದ್ದ ವೃದ್ಧರನ್ನು ರೈಲಿನಿಂದ ದೂರಕ್ಕೆ ಎಳೆದು ಸುರಕ್ಷಿತವಾಗಿ ಮೇಲೆತ್ತಿದ್ದಾರೆ.
ಸಂದೀಪ್ ನಾಯಕ್ ಅವರ ಸಮಯಪ್ರಜ್ಞೆ ಹಾಗೂ ತ್ವರಿತ ಕಾರ್ಯಾಚರಣೆಯಿಂದ ವೃದ್ಧರ ಜೀವ ಉಳಿದಿದೆ. ಅವರ ಸಾಹಸಕ್ಕೆ ರೈಲ್ವೆ ಇಲಾಖೆ ಸೇರಿದಂತೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.








