

ಮಂಗಳೂರು: ನಕಲಿ ಪಾಸ್‌ಪೋರ್ಟ್ ಬಳಸಿ ವಿದೇಶಕ್ಕೆ ತೆರಳಲು ಯತ್ನಿಸಿ ಶಿಕ್ಷೆಗೆ ಗುರಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ವೇಲಾಯುಧನ್ (54) ಎಂದು ಗುರುತಿಸಲಾಗಿದೆ. ಈತ ಕೇರಳದ ಕಾಸರಗೂಡು ಜಿಲ್ಲೆಯ ಬೇವಿಂಜೆ ಗ್ರಾಮದ ನಿವಾಸಿ.
2010ರ ಜೂನ್ 22ರಂದು ಆರೋಪಿ ವೇಲಾಯುಧನ್ ನಕಲಿ ಪಾಸ್‌ಪೋರ್ಟ್ ಪಡೆದು ಬಜಪೆ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ತೆರಳಲು ಯತ್ನಿಸಿದ್ದ. ಈ ವೇಳೆ ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿ ಕೆ.ಎಂ ಚಂದ್ರಶೇಖರ್ ಅವರು ಆರೋಪಿಯನ್ನು ವಶಕ್ಕೆ ಪಡೆದು ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಈ ಸಂಬಂಧ ಬಜಪೆ ಠಾಣೆಯಲ್ಲಿ ಅ.ಕ್ರ 141/2010 ಕಲಂ 419, 420, 468 ಜೊತೆಗೆ 34 ಐಪಿಸಿ ಹಾಗೂ ಪಾಸ್‌ಪೋರ್ಟ್ ಕಾಯ್ದೆ 1967ರ ಕಲಂ 12(1)(b),(d),(e) ಅಡಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯ 2020ರ ಡಿಸೆಂಬರ್ 1ರಂದು ಆರೋಪಿಗೆ 1 ವರ್ಷ 6 ತಿಂಗಳು ಶಿಕ್ಷೆ ವಿಧಿಸಿತ್ತು.ಶಿಕ್ಷೆಯ ವಿರುದ್ಧ ಆರೋಪಿ ಕರ್ನಾಟಕ ಹೈಕೋರ್ಟ್‌ಗೆ ಕ್ರಿಮಿನಲ್ ರಿವಿಜನ್ ಪಿಟಿಷನ್ ನಂ.104/2021 ರಂತೆ ಮೇಲ್ಮನವಿ ಸಲ್ಲಿಸಿದ್ದ, ಆದರೆ ಹೈಕೋರ್ಟ್ ಮನವಿಯನ್ನು ತಿರಸ್ಕರಿಸಿತ್ತು. ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ.ತಲೆಮರೆಸಿಕೊಂಡಿದ್ದ ಆರೋಪಿಯನ್ನು ಅ.8, 2026ರಂದು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು, ಮುಂದಿನ ಕ್ರಮಕ್ಕಾಗಿ ಬಜಪೆ ಠಾಣೆಗೆ ಹಸ್ತಾಂತರಿಸಿದೆ.








