


ಮಂಗಳೂರು: ನಗರದ ಬಾಬುಗೆಡ್ಡೆ ಪ್ರದೇಶದಲ್ಲಿ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ ಘಟನೆ ಸಂಬಂಧ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣದ ಪಿರ್ಯಾದುದಾರರಾದ ಜನಾರ್ಧನ ಅವರು ಪರಿಶಿಷ್ಟ ಜಾತಿ (ಬಾಕುಡ ಜಾತಿ)ಗೆ ಸೇರಿದವರಾಗಿದ್ದಾರೆ. ಅವರ 14 ವರ್ಷದ ಮಗ ಕಿರಣ್ ಕುಮಾರ್ ಫೆ. 23 ರಂದು ಸಂಜೆ ಸುಮಾರು 4 ಗಂಟೆಯ ಸುಮಾರಿಗೆ ತನ್ನ ಸ್ನೇಹಿತೆಯೊಂದಿಗೆ ಬಾಬುಗೆಡ್ಡೆಯ ಗ್ರಾಮ ಸಂಘದ ಬಳಿಯ ರೈಲ್ವೆ ಟ್ರ್ಯಾಕ್ ಬಳಿ ಕುಳಿತು ಮಾತನಾಡುತ್ತಿದ್ದನು ಎನ್ನಲಾಗಿದೆ.
ಈ ವೇಳೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಪುತ್ತೂರು ಕಾರ್ತಿಕ್ ಕೊಲೆ ಆರೋಪಿ ಸಂತೋಷ್ ಅಲಿಯಾಸ್ ಸ್ಟಿವನ್ ಮೊಂತೆರೋ ಮತ್ತು ಅವಿಲ್ ಅಲ್ಲಿ ಬಂದು, ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ವೀಡಿಯೋ ಚಿತ್ರೀಕರಣ ಮಾಡುತ್ತಾ “ನೀವಿಲ್ಲಿ ಕಿಸ್ ಮಾಡುತ್ತಿದ್ದೀರಾ? ನಾನು ರೆಕಾರ್ಡ್ ಮಾಡಿ ಫೇಸ್‌ಬುಕ್‌ನಲ್ಲಿ ಹಾಕುತ್ತೇನೆ” ಎಂದು ಹೇಳಿದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಭಯಗೊಂಡ ಬಾಲಕಿ ಸ್ಥಳದಿಂದ ತೆರಳಿದ್ದಾಳೆ.ನಂತರ ಕಿರಣ್ ಕುಮಾರ್ ಸ್ಥಳದಿಂದ ತೆರಳುವಾಗ ಆರೋಪಿ ಅವಿಲ್ ಆತನನ್ನು ತಡೆದು, ರೈಲ್ವೆ ಟ್ರ್ಯಾಕ್‌ನಿಂದ ಪಕ್ಕದ ರಸ್ತೆಗೆ ಕರೆದುಕೊಂಡು ಹೋಗಿ, ಹುಡುಗಿಯ ಮನೆಯ ಬಗ್ಗೆ ವಿಚಾರಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿದರೆಂದು ಆರೋಪಿಸಲಾಗಿದೆ.
ಈ ವೇಳೆ ಸ್ಟೀವನ್ ಮೊಂತೆರೋ ಕೂಡ ಕಿರಣ್ ಕುಮಾರ್‌ಗೆ “ಇನ್ನೊಮ್ಮೆ ಈ ಕಡೆ ಬಂದರೆ ಕೈಕಾಲು ಮುರಿಯುತ್ತೇನೆ” ಎಂದು ಸಾರ್ವಜನಿಕವಾಗಿ ಬೆದರಿಕೆ ಹಾಕಿದರೆಂದು ದೂರಿನಲ್ಲಿ ತಿಳಿಸಲಾಗಿದೆ. ಇದಲ್ಲದೆ, ಬಳಿಕ ಕಿರಣ್ ಕುಮಾರ್ ಮನೆಗೆ ವಾಪಾಸು ಬರುತ್ತಿರುವಾಗ ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿ ಮತ್ತೆ ಬೆದರಿಕೆ ಹಾಕಿದರೆಂದು ಹಾಗೂ ಚಿತ್ರೀಕರಿಸಿದ ವೀಡಿಯೋವನ್ನು ವಾಟ್ಸ್‌ಆಪ್‌ನಲ್ಲಿ ವೈರಲ್ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.








