ಮಂಗಳೂರು : ನಗರದಲ್ಲಿ ಹೆಚ್ಚುತ್ತಿರುವ ಮಾದಕ ಪದಾರ್ಥಗಳ ಹಾವಳಿಯನ್ನು ತಡೆಗಟ್ಟಲು ಮಂಗಳೂರು ಪೊಲೀಸ್ ಆಯುಕ್ತರು ನಾಲ್ಕು ವಿಶೇಷ ತಂಡಗಳ ರಚನೆ ಮಾಡಿದ್ದು ಸಂಬಂಧ ಪಟ್ಟ ನಾಲ್ಕು ಎಸಿಪಿಗಳಿಗೆ ಇದರ ಜವಾಬ್ದಾರಿ ವಹಿಸಲಾಗಿದೆ.
ಎಸಿಪಿರವರ ಮೇಲ್ವಿಚಾರಣೆಯಲ್ಲಿ ಈ ತಂಡಗಳು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಈಗಾಗಲೇ ಕಾರ್ಯಾಚರಣೆ ಆರಂಭಿಸಿವೆ. ಕಳೆದ 4 ದಿನಗಳಲ್ಲಿ ನಗರದ ವಿವಿಧ ಕಡೆಗಳಲ್ಲಿ ಲಾಡ್ಜ್, ಪಬ್‌ಗಳು, ಹೋಟೇಲ್‌ಗಳು, ಹೋಂ ಸ್ಟೇಗಳು, ರೆಸಾರ್ಟ್ ಗಳು ಮತು ವಿದ್ಯಾರ್ಥಿಗಳು ವಾಸವಾಗಿರುವ ಅಪಾರ್ಟ್‌ಮೆಂಟ್ ಗಳಲ್ಲಿ ಪರಿಶೀಲನೆ ನಡೆಸಿದ್ದು ಈ ಸಂದರ್ಭ 56 ಶಂಕಿತ ವ್ಯಕ್ತಿಗಳನ್ನು ಮಾದಕ ವಸ್ತು ಸೇವನೆಗಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ವೈದ್ಯಕೀಯ ತಪಾಸಣೆಯ ಆಧಾರದ ಮೇಲೆ 27 (B) ಎನ್ ಡಿಪಿಎಸ್ ಕಾಯ್ದೆಯಡಿಯಲ್ಲಿ ಒಟು 12 ಮಾದಕ ವಸ್ತು ಸೇವನೆ ಪ್ರಕರಣಗಳನ್ನು ದಾಖಲಿಸಲಾಯಿತು, ಇದರ ಜೊತೆಗೆ 15 ವ್ಯಕ್ತಿಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ 7 ಮೊಬೈಲ್ ಫೋನ್‌ಗಳು ಮತ್ತು 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ಅವರ ಮಾರ್ಗದರ್ಶನದಲ್ಲಿ ನಡೆದಿದ್ದು. ಎಸಿಪಿಗಳಾದ ಮಹೇಶ್ ಕುಮಾರ್, ಕೇಂದ್ರ ಉಪವಿಭಾಗ ಮನೋಜ್ ಕುಮಾರ್ ನಾಯ್ಕ್, ಉತ್ತರ ಉಪವಿಭಾಗ ಧನ್ಯಾ ನಾಯಕ್, ದಕ್ಷಿಣ ಉಪವಿಭಾಗ ಪಿ.ಎ. ಹೆಗ್ಡೆ, ಸಿಸಿಬಿ ಹಾಗೂ ಪೊಲೀಸ್ ಸಿಬಂದಿ ಪಾಲ್ಗೊಂಡಿದ್ದರು.