

ಮಾಣಿ : ಜೂನ್ 26 : ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಲ್ಲಿ ಸುಪ್ತವಾಗಿ ಹುದುಗಿರುವ ಪ್ರತಿಭೆಗಳನ್ನು ಹೊರತರಲು ಸೂಕ್ತವಾದ ವೇದಿಕೆಯನ್ನು ಒದಗಿಸಲು ಮೂರು ದಿನಗಳ ಕಾಲ ನಡೆಯಲಿರುವ ಶಾಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು “ವಿಕಾಸೋತ್ಸವ 2024-25 – ದ ಕಲ್ಚರಲ್ ಫೆಸ್ಟ್ ” ಹಾಗೂ ವಿಜ್ಞಾನ ಮತ್ತು ಕಲಾ ಸಂಘಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

“ವಿಕಾಸೋತ್ಸವ 2024-25 ದ ಕಲ್ಚರಲ್ ಫೆಸ್ಟ್ -ಫೆಸ್ಟಿವಿಟಿ ಆಫ್ ಕ್ರಿಯೇಟಿವಿಟಿ ” ಎಂದು ಉಲ್ಲೇಖಿಸಲಾದ ವಿಜಯದ ಚೌಕಟ್ಟಿನ ಪರದೆಯನ್ನು ಅನಾವರಣಗೊಳಿಸುವುದರ ಮೂಲಕ ಹಾಗೂ ವಿವಿಧ ಲಲಿತ ಕಲೆಗಳನ್ನು ಬಿಂಬಿಸುವಂತಹ ವಿನ್ಯಾಸವಿರುವ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳಿರುವ ಪೆಟ್ಟಿಗೆಯನ್ನು ತೆರೆಯುವ ಮೂಲಕ ವಿಕಾಸೋತ್ಸವ 2024-25 ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ನಂತರ “ಇನಾಗರೇಷನ್ ಆಫ್ ಸೈನ್ಸ್ ಅಂಡ್ ಆರ್ಟ್ಸ್ ಕ್ಲಬ್ ” ಎಂದು ಉಲ್ಲೇಖಿಸಲಾದ ಎಲ್ ಈ ಡಿ ಬೋರ್ಡಿನ ಗುಂಡಿಯನ್ನು ಒತ್ತುವ ಮೂಲಕ 2024-25ನೇ ಶೈಕ್ಷಣಿಕ ಸಾಲಿನ ವಿಜ್ಞಾನ ಹಾಗೂ ಕಲಾ ಸಂಘವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷ ಪ್ರಹ್ಲಾದ್ ಶೆಟ್ಟಿ ಜೆ “ವಿದ್ಯಾರ್ಥಿಗಳು ಕೇವಲ ಪಠ್ಯ ಚಟುವಟಿಕೆಗಳಿಗೆ ತಮ್ಮನ್ನು ತಾವು ಸೀಮಿತಗೊಳಿಸದೆ ವಿಕಾಸೋತ್ಸವದಂತಹ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಪೋಷಕರ ಹಾಗೂ ಶಿಕ್ಷಕರ ಸೂಕ್ತ ಮಾರ್ಗದರ್ಶನವನ್ನು ಪಡೆದುಕೊಂಡು ತಮ್ಮಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಹೊರತರುವ ಪ್ರಯತ್ನವನ್ನು ಮಾಡಿ ಜಯಗಳಿಸಬೇಕು ” ಎಂದು ಹೇಳಿ ಮಕ್ಕಳಿಗೆ ಶುಭಹಾರೈಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿಗಳಲ್ಲಿ ಓರ್ವರಾದ ಪುತ್ತೂರಿನ ವಿವೇಕಾನಂದ ಕೇಂದ್ರೀಯ ಶಾಲೆಯ ಅಧ್ಯಕ್ಷೆ ವಸಂತಿ ಕೆ ಮಾತನಾಡಿ, “ಮಾಣಿಯಂತಹ ಗ್ರಾಮೀಣ ಪರಿಸರದಲ್ಲಿ ಒಂದು ಅಚ್ಚುಕಟ್ಟಾದ ಹಾಗೂ ಸೌಲಭ್ಯಭರಿತ ಅತ್ಯದ್ಭುತವಾದ ಶಾಲಾ ಕಟ್ಟಡವನ್ನು ನಿರ್ಮಿಸಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅತ್ಯುತ್ತಮವಾದ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷರ ಹಾಗೂ ಕಾರ್ಯದರ್ಶಿಗಳ ತ್ಯಾಗ ಮತ್ತು ಸೇವಾ ಮನೋಭಾವನೆ ಶ್ಲಾಘನೀಯವಾದುದು. ಶಾಲೆಯಲ್ಲಿ ರಚನೆ ಮಾಡುವ ವಿಜ್ಞಾನ ಸಂಘಗಳತಹ ವಿವಿಧ ಸಂಘಗಳು ವಿದ್ಯಾರ್ಥಿಗಳನ್ನು ವಿವಿಧ ಸಂಶೋಧನಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಮಾಡಿ ಜೀವನಾನುಭವಗಳನ್ನು ಗಳಿಸಿಕೊಳ್ಳಲು ನೆರವಾಗುತ್ತವೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಿ ಸ್ವಂತಿಕೆ ಮತ್ತು ಜೀವನಾಸಾಕ್ತಿಗಳನ್ನು ಹೆಚ್ಚಿಸಿಕೊಳ್ಳಬೇಕು “ಎಂದರು.

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಇನ್ನೋರ್ವ ಮುಖ್ಯ ಅತಿಥಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಕರುಣಾಕರ ಬಳ್ಕೂರು ಮಾತನಾಡಿ, ” ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಒಂದು ಅತ್ಯುತ್ತಮ ಶಿಕ್ಷಣ ಸಂಸ್ಥೆ. ಎಲ್ಲಾ ಪೋಷಕರು ತಮ್ಮ ನಿಷ್ಕಲ್ಮಶ ಮನಸ್ಸಿನ ಮಕ್ಕಳಿಗೆ ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣವನ್ನು ಒದಗಿಸುತ್ತಿರುವುದು ಸಾರ್ಥಕ. ಹಳ್ಳಿಯ ಪರಿಸರದಲ್ಲಿ ಸುಂದರವಾದ ಪ್ರಕೃತಿ ಮಾತೆಯ ಮಡಿಲಲ್ಲಿ ಅತ್ಯದ್ಭುತವಾದ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿರುವ ಇಂತಹ ಶಾಲೆಯಲ್ಲಿ ನಾನು ಕೂಡ ಒಬ್ಬ ವಿದ್ಯಾರ್ಥಿಯಾಗಿರಬೇಕಿತ್ತು ಎಂದು ಅನಿಸುತ್ತಿದೆ. ವಿದ್ಯೆ ಕದಿಯಲಾಗದ ಸಂಪತ್ತು. ಅಂತಹ ವಿದ್ಯೆಯನ್ನು ಮಕ್ಕಳೆಲ್ಲರೂ ಇಷ್ಟಪಟ್ಟು ಕಲಿತು ವಿದ್ಯೆಯ ಜೊತೆಗೆ ಸಾಂಸ್ಕೃತಿಕವಾಗಿಯೂ ಕೂಡ ಬೆಳೆಯಬೇಕು. ಈ ಮೂರು ದಿನಗಳ ಕಾಲ ಶಾಲೆಯಲ್ಲಿ ನಡೆಯುವ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮಕ್ಕಳೆಲ್ಲರೂ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿ ಜೀವನದಲ್ಲಿ ಸಾಧನೆಯನ್ನು ಮಾಡಬೇಕು” ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. “ಬಾಲವಿಕಾಸ ನೀಡುತ್ತಿರುವ ಈ ಅದ್ಭುತವಾದ ಶಿಕ್ಷಣ ಸೇವೆ ಇನ್ನೂ ಹಲವಾರು ವರ್ಷಗಳವರೆಗೆ ಹಾಗೇ ಮುಂದುವರಿಯಲಿ ” ಎಂದು ಶುಭ ಹಾರೈಸಿದರು.
ಜೂನ್ 26 ರಿಂದ ಜೂನ್ 28ರವರೆಗೆ 3 ದಿನಗಳ ಕಾಲ ನಡೆಯುವ ಈ ಸಾಂಸ್ಕೃತಿಕ ಹಬ್ಬದಲ್ಲಿ ಒಟ್ಟು 83 ಸ್ಪರ್ಧೆಗಳು ನಡೆಯಲಿದ್ದು ಒಂದರಿಂದ ಹತ್ತನೆ ತರಗತಿಯವರೆಗಿನ ಒಟ್ಟು 647 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಲವಿಕಾಸ ಟ್ರಸ್ಟಿನ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ವ್ಯವಸ್ಥಾಪಕಿ ನಯನ ಎಂ, ಶಾಲಾ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವಿಜಯಲಕ್ಷ್ಮಿ ವಿ ಶೆಟ್ಟಿ, ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗ, ಪೋಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಶಾಲಾ ಪ್ರಾಂಶುಪಾಲ ರವೀಂದ್ರ ದರ್ಬೆ ಸ್ವಾಗತಿಸಿದರು, ಸಹಶಿಕ್ಷಕಿಯರಾದ ಜಯಶ್ರೀ ಆಚಾರ್ಯ ಹಾಗೂ ಅನಿತಾ ಜಿ. ನಿರೂಪಿಸಿದರು, ಸಹಶಿಕ್ಷಕಿ ಯಜ್ಞೆಶ್ವರಿ ಎನ್ ವಂದಿಸಿದರು.








