ಮಣಿಪಾಲ: ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಓರ್ವ ಯುವಕ ಮೃತಪಟ್ಟು, ಹಲವು ಮಂದಿ ಗಾಯಗೊಂಡ ಘಟನೆ ಇಂದ್ರಾಳಿ ದೇವಸ್ಥಾನದ ಬಳಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಪಡುಬಿದ್ರಿ ನಿವಾಸಿ ದೀಪೇಶ್ ದೇವಾಡಿಗ(35) ಎಂದು ಗುರುತಿಸಲಾಗಿದೆ.
ಮಣಿಪಾಲ ಪ್ರೆಸ್‌ನಲ್ಲಿ ಉದ್ಯೋಗಿಯಾಗಿದ್ದ ದೀಪೇಶ್ ನವರಾತ್ರಿ ಹಿನ್ನೆಲೆಯಲ್ಲಿ ಇಂದ್ರಾಳಿ ದೇವಸ್ಥಾನಕ್ಕೆ ಅನ್ನ ಸಂತರ್ಪಣೆಗೆ ಬಂದಿದ್ದರು. ಊಟ ಮಾಡಿದ ಬಳಿಕ ಇಳಿಜಾರು ರಸ್ತೆಯಲ್ಲಿ ಇವರು ಬೈಕ್ ಪಾರ್ಕ್ ಮಾಡಿದ ಕಡೆಗೆ ನಡೆದುಕೊಂಡು ಬರುತ್ತಿದ್ದರು.
ಈ ವೇಳೆ ಹಿಂದಿನಿಂದ ಬಂದ ಕೆಳಪರ್ಕಳದ ಸುರೇಶ್ ಚಾಲನೆ ಮಾಡುತ್ತಿದ್ದ ಕಾರು, ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡ ದೀಪೇಶ್ ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ಇವರೊಂದಿಗೆ ನಡೆದುಕೊಂಡು ಬರುತ್ತಿದ್ದ ಪರ್ಕಳದ ಪ್ರವೀಣ್ ಸೇರಿದಂತೆ ನಾಲ್ಕೈದು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಣಿಪಾಲ ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ಕಾರನ್ನು ವಶಪಡಿಸಿಕೊಂಡಿದ್ದಾರೆ.