ಲಖನೌ: ಲೈಂಗಿಕ ದೌರ್ಜನ್ಯವೆಸಗಿ ಮನೆಯ ಎರಡನೇ ಮಹಡಿಯಿಂದ ದೂಡಿ ಹಾಕಿರುವ ಘಟನೆಯ ಭಯಾನಕ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಘಟನೆಯು ಸೋಮವಾರ ರಾತ್ರಿ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.

ಈ ಘಟನೆಯು ಸೋಮವಾರ ರಾತ್ರಿ 8ರ ಸುಮಾರಿಗೆ ನಡೆದಿದ್ದು, ಕೆಲ ಯುವಕರು ಸಂತ್ರಸ್ತೆ ಯುವತಿಯ ಮನೆಗೆ ನುಗ್ಗಿ ಸಂತ್ರಸ್ತೆಯ ತಾಯಿ ಮತ್ತು ಸಹೋದರನ ಮೇಲೆ ದಾಳಿ ಮಾಡಿದ್ದಾರೆ. ಬಳಿಕ ಕೋಣೆಯಲ್ಲಿದ್ದ ಸಂತ್ರಸ್ತೆಯನ್ನು ಇಬ್ಬರು ಯುವಕರು ಎರಡನೇ ಮಹಡಿ ಮೇಲೆ ಎಳೆದೊಯ್ದು ಆಕೆಯ ಮೇಲೆ ದೌರ್ಜನ್ಯವೆಸಗಿ ಅಲ್ಲಿಂದ ಕೆಳಗಡೆ ನೂಕಿ ಹಾಕಿದ್ದಾರೆ. ಬಳಿಕ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾದರು ಎಂದು ಸಂತ್ರಸ್ತೆಯ ಸಹೋದರ ದಿನೇಶ್ ಸಿಂಗ್ ಹೇಳಿದ್ದಾರೆ.

ಎರಡನೇ ಮಹಡಿಯಿಂದ ಅಪ್ರಾಪ್ತ ಯುವತಿ ಬೀಳುತ್ತಿರುವ ದೃಶ್ಯ ಮನೆಯ ಮುಂದಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ಸಮಯದಲ್ಲಿ ಆಕೆಯ ಸ್ಥಿತಿ ಗಂಭೀರವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಮಥುರಾ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.











