

ಒಂದು ಮನೆಯ ಅಂಗಳದಲ್ಲಿ ಲಂಗ ದಾವಣಿ ತೊಟ್ಟ ಪುಟ್ಟ ಹುಡುಗಿಯೊಬ್ಬಳು ಚಿಟ್ಟೆಯ ಹಿಂದೆ ಓಡುತ್ತಿದ್ದಾಳೆ. ಅವಳಿಗೆ ಆಕಾಶದ ಎತ್ತರ ಗೊತ್ತಿಲ್ಲ; ಹಾರಾಟದ ಮಿತಿಯೂ ತಿಳಿದಿಲ್ಲ. ಚಿಟ್ಟೆಯನ್ನು ಹಿಡಿಯಬೇಕೆಂಬ ಕುತೂಹಲವಷ್ಟೇ ಅವಳಲ್ಲಿದೆ. ಆದರೆ ಅವಳು ಬೆಳೆಯುತ್ತ ಹೋದಂತೆ, ಅವಳ ಓಟಕ್ಕೆ ಮಿತಿಯನ್ನು ಹೇರಲಾಗುತ್ತದೆ; ಕುತೂಹಲಕ್ಕೆ ಪ್ರಶ್ನೆ ಎದುರಾಗುತ್ತದೆ; ಕನಸುಗಳಿಗೆ ಮನೆಯ ಪರಿಸ್ಥಿತಿ, ಸಮಾಜದ ಸಂಪ್ರದಾಯ, ಸುರಕ್ಷತೆಯ ಆತಂಕ ಮತ್ತು ಭವಿಷ್ಯದ ಲೆಕ್ಕಾಚಾರಗಳು ಅಡ್ಡಿಯಾಗುತ್ತವೆ. ಬಾಲ್ಯದಲ್ಲಿ ಎಲ್ಲಾ ದಿಕ್ಕುಗಳಲ್ಲೂ ಮನಸೋ ಇಚ್ಛೆ ಸುತ್ತುವ ಅವಳ ಬದುಕಿನಲ್ಲಿ, ಬೆಳೆದಂತೆ ಆಯ್ಕೆಗಳ ಬಾಗಿಲುಗಳು ಏಕೆ ಮುಚ್ಚಿಕೊಳ್ಳುತ್ತವೆ? ಈ ಪ್ರಶ್ನೆಯೇ ಅಂತರರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯ ಮೂಲ ಆಶಯವನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. ಪ್ರತೀ ವರ್ಷ ಅಕ್ಟೋಬರ್ 11ರಂದು ಆಚರಿಸಲಾಗುವ ಈ ದಿನವು ಹೆಣ್ಣುಮಕ್ಕಳ ಹಕ್ಕುಗಳು, ಶಿಕ್ಷಣ, ಆರೋಗ್ಯ, ಸುರಕ್ಷತೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯದ ಕುರಿತು ಜಗತ್ತಿನ ಗಮನ ಸೆಳೆಯುತ್ತದೆ. 2026ರ ಆಶಯವೂ ಬಾಲ್ಯವಿವಾಹವನ್ನು ಅಂತ್ಯಗೊಳಿಸಿ ಹೆಣ್ಣುಮಕ್ಕಳ ಹಕ್ಕುಗಳ ಬಗ್ಗೆ ಜಾಗೃತರಾಗಬೇಕಾದ ತುರ್ತನ್ನು ಒತ್ತಿಹೇಳುತ್ತದೆ.
ಮನೆಯಲ್ಲಿ ಹೆಣ್ಣುಮಗು ಹುಟ್ಟಿದಾಗ ಸಂಭ್ರಮಿಸುವ ಕುಟುಂಬಗಳ ಸಂಖ್ಯೆ ಇಂದು ಹೆಚ್ಚಾಗುತ್ತಿದೆ. ಹೆಣ್ಣುಮಕ್ಕಳ ಶಿಕ್ಷಣದ ಮಹತ್ವದ ಬಗ್ಗೆಯೂ ಅರಿವು ವಿಸ್ತರಿಸಿದೆ. ವೈದ್ಯೆ, ವಿಜ್ಞಾನಿ, ಆಡಳಿತಾಧಿಕಾರಿ, ಕ್ರೀಡಾಪಟು, ಉದ್ಯಮಿ, ಕಲಾವಿದೆ ಹೀಗೆ ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಆದರೂ ಈ ಪ್ರಗತಿಯ ಚಿತ್ರ ಪೂರ್ಣ ಸತ್ಯವಲ್ಲ. ಅವಕಾಶ ದೊರೆತ ಹೆಣ್ಣುಮಕ್ಕಳ ಸಾಧನೆ ಒಂದು ಮುಖವಾದರೆ, ಅವಕಾಶದ ಬಾಗಿಲಿಗೇ ತಲುಪದ ಲಕ್ಷಾಂತರ ಬಾಲಕಿಯರ ವಾಸ್ತವ ಮತ್ತೊಂದು ಮುಖ.
ಹೆಣ್ಣುಮಕ್ಕಳನ್ನು ಪ್ರೀತಿಸುವುದಕ್ಕೂ ಅವರ ಸ್ವಾತಂತ್ರ್ಯವನ್ನು ಗೌರವಿಸುವುದಕ್ಕೂ ವ್ಯತ್ಯಾಸವಿದೆ. ಸುರಕ್ಷತೆಯ ಹೆಸರಿನಲ್ಲಿ ಅವರ ಸಂಚಾರವನ್ನು ನಿಯಂತ್ರಿಸುವುದು, ಕುಟುಂಬದ ಗೌರವದ ಹೆಸರಿನಲ್ಲಿ ಅವರ ಮಾತುಗಳನ್ನು ಹತ್ತಿಕ್ಕುವುದು, ಸಂಪ್ರದಾಯದ ಹೆಸರಿನಲ್ಲಿ ಅವರ ಆಸೆಗಳನ್ನು ನಿರಾಕರಿಸುವುದು ಪ್ರೀತಿಯ ಆರೋಗ್ಯಕರ ಅಭಿವ್ಯಕ್ತಿಯಲ್ಲ. ಮಗನಿಗೆ ಅಪಾಯ ಎದುರಿಸುವ ಸಾಮರ್ಥ್ಯ ಬೆಳೆಸಬೇಕೆಂದು ಹೇಳುವ ಸಮಾಜ, ಮಗಳಿಗೆ ಅಪಾಯ ತಪ್ಪಿಸಿಕೊಳ್ಳುವ ಕಲೆಯನ್ನಷ್ಟೇ ಕಲಿಸಿದರೆ ಸಮಾನತೆಯ ಪಯಣ ಅಪೂರ್ಣವಾಗುತ್ತದೆ. ಈ ಮನೋಭಾವ ಕುಟುಂಬದಲ್ಲಿಯೇ ಆರಂಭವಾಗುತ್ತದೆ. ಮನೆಯ ಕೆಲಸ ಹೆಣ್ಣುಮಗಳ ಜವಾಬ್ದಾರಿ, ಆರ್ಥಿಕ ನಿರ್ಧಾರ ಗಂಡುಮಗನ ಹಕ್ಕು, ವೃತ್ತಿಜೀವನದ ಆಯ್ಕೆಯಲ್ಲಿ ಮಗನ ಆಸೆಗೆ ಆದ್ಯತೆ ಎಂಬ ಸಣ್ಣಸಣ್ಣ ಭೇದಗಳು ಕ್ರಮೇಣ ದೊಡ್ಡ ಸಾಮಾಜಿಕ ಅಸಮಾನತೆಯಾಗಿ ಬೆಳೆಯುತ್ತವೆ. ಇವುಗಳನ್ನು ತೊಡೆದು ಹಾಕಬೇಕಾದರೆ ಸಮಾನತೆಯನ್ನು ಪಠ್ಯಪುಸ್ತಕದಲ್ಲಿ ಬೋಧಿಸುವುದಕ್ಕಿಂತ, ಮನೆಯ ದಿನನಿತ್ಯದ ಬದುಕಿನಲ್ಲಿ ಅನುಸರಿಸುವುದು ಹೆಚ್ಚು ಪರಿಣಾಮಕಾರಿ.
ಜ್ಞಾನ ಜಗತ್ತಿಗೆ ಲಗ್ಗೆಯಿಡಲು ಹೆಣ್ಣು ಮಕ್ಕಳು ಶಾಲೆಗೆ ಪ್ರವೇಶ ಪಡೆಯುವುದು ಮುಖ್ಯ; ಜೊತೆಗೆ ಶಾಲೆಯಲ್ಲಿಯೇ ಉಳಿದು ಶಿಕ್ಷಣ ಪೂರ್ಣಗೊಳಿಸುವುದೂ ಅಷ್ಟೇ ಮುಖ್ಯ. ಬಡತನ, ದೂರದಲ್ಲಿರುವ ಶಾಲೆ, ಸುರಕ್ಷಿತ ಸಾರಿಗೆಯ ಕೊರತೆ, ಶೌಚಾಲಯಗಳ ಅಭಾವ, ಋತುಸ್ರಾವದ ಕುರಿತ ಮುಜುಗರ, ಮನೆಯ ಆರೈಕೆ ಕೆಲಸಗಳು ಮತ್ತು ಬಾಲ್ಯವಿವಾಹದ ಒತ್ತಡಗಳು ಕೆಲವು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತವೆ. ಗ್ರಾಮೀಣ ಪ್ರದೇಶಗಳು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಹಾಗೂ ಕೆಲವು ಸಮುದಾಯಗಳ ಬಾಲಕಿಯರಿಗೆ ಈ ಅಡೆತಡೆಗಳು ಇನ್ನಷ್ಟು ಸಂಕೀರ್ಣವಾಗಬಹುದು.
ಯುನಿಸೆಫ್‌ನ ಭಾರತ ಕುರಿತ ವರದಿ ಪ್ರಕಾರ, 18 ವರ್ಷ ತುಂಬುವ ಮೊದಲು ಮದುವೆಯಾದ ಯುವತಿಯರ ಪ್ರಮಾಣ ಸುಮಾರು ಶೇ. 23ರಷ್ಟಿದ್ದು, ಇದು ಹಿಂದಿನ ತಲೆಮಾರುಗಳಿಗೆ ಹೋಲಿಸಿದರೆ ಪ್ರಗತಿಯ ನಡುವೆಯೂ ಸಮಸ್ಯೆ ಇನ್ನೂ ಗಂಭೀರವಾಗಿದೆ ಎಂಬುದನ್ನು ತೋರಿಸುತ್ತದೆ. ಬಾಲ್ಯವಿವಾಹವನ್ನು ಕೇವಲ ಒಂದು ಕುಟುಂಬದ ಸಂಪ್ರದಾಯ ಅಥವಾ ವೈಯಕ್ತಿಕ ನಿರ್ಧಾರವೆಂದು ಪರಿಗಣಿಸಲಾಗದು. ಅದು ಮಗುವಿನ ಶಿಕ್ಷಣ, ಆರೋಗ್ಯ, ಆರ್ಥಿಕ ಸ್ವಾವಲಂಬನೆ ಮತ್ತು ತನ್ನ ಭವಿಷ್ಯದ ಬಗ್ಗೆ ತೀರ್ಮಾನಿಸುವ ಹಕ್ಕನ್ನು ಕುಗ್ಗಿಸುತ್ತದೆ. ಹೆಣ್ಣುಮಗಳು ಇನ್ನೂ ತನ್ನ ಆಸಕ್ತಿಗಳನ್ನು ಅರಿತುಕೊಳ್ಳುತ್ತಿರುವ ವಯಸ್ಸಿನಲ್ಲಿ, ಅವಳ ಬದುಕಿನ ದಿಕ್ಕನ್ನೇ ನಿರ್ಧರಿಸುವ ಹೊಣೆಗಾರಿಕೆಯನ್ನು ಅವಳ ಮೇಲೆ ಹೊರಿಸುವುದು ನ್ಯಾಯವಲ್ಲ. ಬಾಲ್ಯವನ್ನು ಕಾಪಾಡುವುದು ಕೇವಲ ಕಾನೂನಿನ ಕರ್ತವ್ಯವಲ್ಲ; ಅದು ಸಮಾಜದ ನೈತಿಕ ಹೊಣೆಗಾರಿಕೆಯೂ ಹೌದು.
ಇಂದಿನ ಹೆಣ್ಣುಮಕ್ಕಳ ಬದುಕು ತರಗತಿ ಕೊಠಡಿ ಮತ್ತು ಮನೆಯ ಅಂಗಳಕ್ಕೆ ಮಾತ್ರ ಸೀಮಿತವಾಗಿಲ್ಲ. ಮೊಬೈಲ್, ಸಾಮಾಜಿಕ ಜಾಲತಾಣಗಳು, ಆನ್‌ಲೈನ್ ಶಿಕ್ಷಣ ಮತ್ತು ಡಿಜಿಟಲ್ ಜ್ಞಾನ ಹೊಸ ಅವಕಾಶಗಳನ್ನು ತೆರೆದಿವೆ. ಅದೇ ಸಂದರ್ಭದಲ್ಲಿ ಆನ್‌ಲೈನ್ ಕಿರುಕುಳ, ಖಾಸಗಿತನದ ಉಲ್ಲಂಘನೆ, ಬೆದರಿಕೆ ಮತ್ತು ವಂಚನೆಯಂತಹ ಅಪಾಯಗಳೂ ಎದುರಾಗುತ್ತಿವೆ. ಇದಕ್ಕೆ ಪರಿಹಾರವಾಗಿ ಹೆಣ್ಣುಮಕ್ಕಳಿಗೆ ತಂತ್ರಜ್ಞಾನವನ್ನು ನಿರಾಕರಿಸುವುದು ಸೂಕ್ತವಲ್ಲ. ಬದಲಿಗೆ ಡಿಜಿಟಲ್ ಸಾಕ್ಷರತೆ, ಸುರಕ್ಷಿತ ಬಳಕೆಯ ಅರಿವು, ದೂರು ಸಲ್ಲಿಸಲು ವಿಶ್ವಾಸಾರ್ಹ ವ್ಯವಸ್ಥೆ ಮತ್ತು ತಪ್ಪು ನಡೆದಾಗ ಮಗುವನ್ನೇ ದೂಷಿಸದ ವಾತಾವರಣವನ್ನು ನಿರ್ಮಿಸಬೇಕು. ಸುರಕ್ಷತೆಯ ಹೊಣೆಗಾರಿಕೆ ಹೆಣ್ಣುಮಗಳ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವಂತಿರಬಾರದು; ಆಕೆಯ ಸ್ವಾತಂತ್ರ್ಯವನ್ನು ರಕ್ಷಿಸುವಂತಿರಬೇಕು.
ಹೆಣ್ಣುಮಕ್ಕಳ ದಿನಾಚರಣೆಯಂದು ಭಾಷಣಗಳು, ಘೋಷಣೆಗಳು, ಬಹುಮಾನ ವಿತರಣೆಗಳು ನಡೆದರೂ ಮರುದಿನವೇ ಶಾಲೆ ಬಿಡುವ ಬಾಲಕಿ, ಬಾಲ್ಯವಿವಾಹದ ಒತ್ತಡ ಎದುರಿಸುವ ಮಗು, ಪೌಷ್ಟಿಕ ಆಹಾರದಿಂದ ವಂಚಿತಳಾಗುವ ಕಿಶೋರಿ ಮತ್ತು ತನ್ನ ಅಭಿಪ್ರಾಯ ಹೇಳಲು ಹೆದರುವ ವಿದ್ಯಾರ್ಥಿನಿ ನಮ್ಮ ಸಾಮಾಜಿಕ ವಾಸ್ತವವಕ್ಕೆ ಕನ್ನಡಿ ಹಿಡಿಯುವಂತೆ ಮತ್ತೆ ನಮ್ಮ ಮುಂದೆ ಕಾಣಸಿಗುತ್ತಾರೆ.
ಹಾಗಾಗದಿರಬೇಕಾದರೆ, ಪೋಷಕರು ಹೆಣ್ಣುಮಕ್ಕಳ ಆಸಕ್ತಿಗಳನ್ನು ಆಲಿಸಬೇಕು. ಶಾಲೆಗಳು ಲಿಂಗಸಂವೇದನಾಶೀಲ ವಾತಾವರಣ ನಿರ್ಮಿಸಬೇಕು. ಸ್ಥಳೀಯ ಆಡಳಿತವು ಶಾಲೆ, ಸಾರಿಗೆ, ಆರೋಗ್ಯ ಮತ್ತು ಮಕ್ಕಳ ರಕ್ಷಣಾ ಸೇವೆಗಳನ್ನು ಬಲಪಡಿಸಬೇಕು. ಬಾಲ್ಯವಿವಾಹದ ಸಾಧ್ಯತೆ ಕಂಡಾಗ ಸಂಬಂಧಿತ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಬೇಕು. ಒಟ್ಟಿನಲ್ಲಿ, ಸರ್ಕಾರದ ಯೋಜನೆಗಳು ಕಾಗದದಲ್ಲಿರುವುದಕ್ಕಿಂತ ಫಲಾನುಭವಿಗಳಿಗೆ ತಲುಪುತ್ತಿವೆಯೇ ಎಂಬುದರ ಪರಿಶೀಲನೆ ಅಗತ್ಯ.
ಅತ್ಯಂತ ಮುಖ್ಯವಾಗಿ, ಹೆಣ್ಣುಮಕ್ಕಳಿಗಾಗಿ ರೂಪಿಸುವ ಯೋಜನೆಗಳಲ್ಲಿ ಅವರ ಧ್ವನಿಗೂ ಸ್ಥಾನವಿರಬೇಕು. ಅವರ ಬದುಕಿನ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವರನ್ನು ಕೇವಲ ಫಲಾನುಭವಿಗಳೆಂದು ನೋಡದೆ, ಹಕ್ಕುಳ್ಳ ವ್ಯಕ್ತಿಗಳೆಂದು ಪರಿಗಣಿಸಬೇಕು. ಹೆಣ್ಣುಮಗುವಿಗೆ ನಾವು ನೀಡಬೇಕಾದ ದೊಡ್ಡ ಉಡುಗೊರೆ ಆಕೆಯ ಪರವಾಗಿ ಪ್ರತಿಯೊಂದು ನಿರ್ಧಾರವನ್ನೂ ತೆಗೆದುಕೊಳ್ಳುವುದಲ್ಲ; ಸರಿಯಾದ ನಿರ್ಧಾರ ತೆಗೆದುಕೊಳ್ಳುವಷ್ಟು ಜ್ಞಾನ, ಆತ್ಮವಿಶ್ವಾಸ ಮತ್ತು ಸ್ವಾತಂತ್ರ್ಯವನ್ನು ನೀಡುವುದು. ಆಕೆಯ ಕನಸಿಗೆ ಮಿತಿ ಹಾಕದ ಮನೆ, ಪ್ರತಿಭೆಗೆ ಅವಕಾಶ ನೀಡುವ ಶಾಲೆ, ಘನತೆಯನ್ನು ಗೌರವಿಸುವ ಸಮಾಜ ಮತ್ತು ಹಕ್ಕುಗಳನ್ನು ರಕ್ಷಿಸುವ ಆಡಳಿತ ಇವು ಒಂದಾದಾಗ ಮಾತ್ರ ಈ ದಿನದ ಆಚರಣೆಗೆ ಅರ್ಥ ಸಿಗುತ್ತದೆ. ಆದುದರಿಂದ, ಇನ್ನಾದರೂ ಚಿಟ್ಟೆಯ ಹಿಂದೆ ಓಡುವ ಮಗುವಿನ ಕೈ ಹಿಡಿದು ಅವಳನ್ನು ನಿಲ್ಲಿಸುವುದಕ್ಕಿಂತ, ಅವಳ ಹಾರಾಟಕ್ಕೆ ಸುರಕ್ಷಿತ ಆಕಾಶವನ್ನು ನಿರ್ಮಿಸೋಣ.
✍ಡಾ. ಮೈತ್ರಿ ಭಟ್, ವಿಟ್ಲ








