


ಕಾರವಾರ: ಮೊಬೈಲ್ ಅಂಗಡಿ ಬೀಗ ಮುರಿದು ಕಳ್ಳತನ ಮಾಡಿದ ನಾಲ್ವರು ಶಾಲಾ ವಿದ್ಯಾರ್ಥಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಮಂಡಗೋಡು ಠಾಣೆ ಪೊಲೀಸರು ಬಂಧಿಸಿ ವಿವಿಧ ಕಂಪನಿಯ ಮೊಬೈಲ್ ಸೇರಿದಂತೆ ಎಲಕ್ಟ್ರಾನಿಕ್ ಗೆಜೆಟ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ವಿದ್ಯಾರ್ಥಿಗಳು ವಸತಿ ಶಾಲೆಯೊಂದರಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದರು. ನಾಲ್ವರು ವಿದ್ಯಾರ್ಥಿಗಳು ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ವಸತಿ ನಿಲಯದಿಂದ ಸುಮಾರು ಎರಡು ಕಿಮೀ ದೂರದಲ್ಲಿರುವ ಮುಂಡಗೋಡು ಪಟ್ಟಣಕ್ಕೆ ಬಂದಿದ್ದು, ಮೊದಲು ಯಲ್ಲಾಪುರ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಯ ಮೇಲ್ಛಾವಣಿಯಿಂದ ಒಳನುಗ್ಗಿ ಮೊಬೈಲ್ಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಅಲ್ಲಿ ಮೊಬೈಲ್ಗಳು ಸಿಗದ ಹಿನ್ನೆಲೆ ಅಲ್ಲಿಂದ ತೆರಳಿ ಶಿರಸಿ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಯ ಕಬ್ಬಿಣದ ಬಾಗಿಲು ಹಾಗೂ ಬೀಗ ಮುರಿದು ಒಳನುಗ್ಗಿದ್ದಾರೆ.
ರಿಪೇರಿಗೆ ಬಂದಿದ್ದ ಮೊಬೈಲ್ಗಳು, ಪವರ್ ಬ್ಯಾಂಕ್ಗಳು, ನೆಕ್ಬ್ಯಾಂಡ್ಗಳು, ಇಯರ್ಬಡ್ಸ್, ಸ್ಪೀಕರ್ಗಳು, ಮೊಬೈಲ್ ಚಾರ್ಜರ್ಗಳು ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೋದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಿಸಿಟಿವಿ ದೃಶ್ಯ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಬೆಳಗಾವಿ ಜಿಲ್ಲೆಯ ರಾಮದುರ್ಗ ಮೂಲದ ನಾಲ್ಕು ಜನ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ. ಅವರಿಂದ ವಸತಿ ಶಾಲೆಯಲ್ಲಿ ಮುಚ್ಚಿಟ್ಟಿದ್ದ 63,920 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು ,ಕೃತ್ಯಕ್ಕೆ ಬಳಸಿದ ಬ್ಯಾಟರಿ, ಕಟರ್, ಸುತ್ತಿಗೆ, ಕಬ್ಬಿಣ ಕತ್ತರಿಸುವ ಬ್ಲೇಡ್ ಸೇರಿದಂತೆ ವಿವಿಧ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿರುವುದಾಗಿ ತಿಳಿದುಬಂದಿದೆ.








