

ಮುಂಬೈ: ಎರಡಕ್ಕಿಂತ ಹೆಚ್ಚು ಮಕ್ಕಳಿದ್ರೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇಲ್ಲ ಎಂಬ ಕಾರಣಕ್ಕೆ ಮಹಾರಾಷ್ಟ್ರದ ವ್ಯಕ್ತಿಯೊಬ್ಬ ತನ್ನ ಮಗಳನ್ನು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಬೋಧನ್ ಕಾಲುವೆಗೆ ನೂಕಿ ಹತ್ಯೆ ಮಾಡಿದ್ದಾನೆ.ಕೊಲೆಯಾದ ಬಾಲಕಿಯನ್ನು ಪ್ರಾಚಿ (6), ಹತ್ಯೆಗೈದ ಆರೋಪಿಯನ್ನು ನಾಂದೇಡ್ ಜಿಲ್ಲೆಯ ಮುಖೇಡ್ ತಾಲೂಕಿನ ಕೆರೂರ್ ಗ್ರಾಮದ ನಿವಾಸಿಯಾಗಿ ಪಾಂಡುರಂಗ ಕೊಂಡ್ಮಂಗಳೆ (28) ಎಂದು ಗುರುತಿಸಲಾಗಿದೆ. ಆರೋಪಿ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
ನಿಜಾಮಾಬಾದ್ ಪೊಲೀಸರು ಪ್ರಕರಣದ ಆರೋಪಿ ಪಾಂಡುರಂಗ ಮತ್ತು ಗ್ರಾಮದ ಸರಪಂಚ್ ಗಣೇಶ್ ರಾಮಚಂದ್ರ ಶಿಂಧೆಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿಜಾಮಾಬಾದ್ ಪೊಲೀಸ್ ಆಯುಕ್ತ ಪಿ. ಸಾಯಿ ಚೈತನ್ಯ, ಕೆಲವು ದಿನಗಳ ಹಿಂದೆ ಯೆಡಪಲ್ಲಿಯ ನಿಜಾಮ ಸಾಗರ್ ಕಾಲುವೆಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಪೊಲೀಸರು ಆಕೆಯ ತಂದೆಯನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಆಕೆ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿ ಪೊಲೀಸರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದ. ತನಿಖಾಧಿಕಾರಿ ವಿಚಾರಣೆ ನಡೆಸಿದಾಗ, ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿ ಮೂಲಕ ತಿಳಿದು ಬಂದಿದೆ.








