
ರಾಂಚಿ ಜಾರ್ಖಂಡ್ನ ಗೊಡ್ಡದಲ್ಲಿ ಇನ್ನೊಂದು ಭೀಕರ ಹತ್ಯಾಕಾಂಡ ನಡೆದಿದ್ದು, ಮಾಟ ಮಾಡುತ್ತಿದ್ದರೆಂದು ಆರೋಪಿಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಒಂದೇ ಕುಟುಂಬದ ಮೂವರನ್ನು ದುಷ್ಕರ್ಮಿಗಳು ಥಳಿಸಿ ಹತ್ಯೆಗೈದಿದ್ದಾರೆ.

ಗಂಡ, ಹೆಂಡತಿ ಮತ್ತು ಅವರ 12 ವರ್ಷದ ಮಗನ ಮೇಲೆ ಅಜ್ಞಾತ ವ್ಯಕ್ತಿಗಳು ಸೋಮವಾರ ರಾತ್ರಿ ಮಾರಕಾಸ್ತ್ರಗಳಿಂದ ಆಕ್ರಮಣ ಮಾಡಿದರು ಎಂದು ಪೊಲೀಸರು ತಿಳಿಸಿದರು. ದಾಳಿಯಲ್ಲಿ 50 ವರ್ಷದ ದರ್ಬಾರಿ ಮುರ್ಮು, ಅವರ 45 ವರ್ಷದ ಪತ್ನಿ ಮಕ್ಕು ಬಾಸ್ಕಿ ಮತ್ತು ಅವರ 12 ವರ್ಷದ ಮಗ ಜೀತ್ನಾರಾಯಣ್ ಮುರ್ಮು ಮೃತಪಟ್ಟರು.
ಹತ್ಯಾಕಾಂಡದ ವಿಷಯ ಮಂಗಳವಾರ ಬೆಳಗ್ಗೆ ಹರಡಿದ ಬಳಿಕ ಇಡೀ ಗ್ರಾಮದಲ್ಲಿ ಭೀತಿಯ ವಾತಾವರಣ ನೆಲೆಸಿದೆ.ಮಂಗಳವಾರ ಬೆಳಗ್ಗೆ ಪೊಲೀಸರು ಸಳಕ್ಕೆ ತೆರಳಿ ತನಿಖೆ ಆರಂಭಿಸಿದ್ದಾರೆ. ಮೂರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಪೊಲೀಸರು ಹತ್ಯಾಕಾಂಡಕ್ಕೆ ಸಂಬಂಧಿಸಿ ಮೂವರು ಶಂಕಿತರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.”ಗೊಡ್ಡದ ದಂಗ್ ತೊಲ ಎಂಬಲ್ಲಿ ಬುಡಕಟ್ಟು ಸಮುದಾಯದ ದಂಪತಿ ಮತ್ತು ಅವರ ಅಪ್ರಾಪ್ತ ಮಗನನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಮಾಟ ಮಾಡುತ್ತಿದ್ದರೆಂಬ ಆರೋಪ ಹೊರಿಸಿ ಈ ಹತ್ಯೆ ನಡೆದಿರುವಂತೆ ಮೇಲ್ನೋಟಕ್ಕೆ ಕಂಡುಬಂದಿದೆ.ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ” ಎಂದು ಗೊಡ್ಡ ಪೊಲೀಸ್ ಅಧಿಕಾರಿ ಅಶೋಕ್ ಪ್ರಿಯದರ್ಶಿ ಹೇಳಿದರು..










