Friday, April 26, 2024
spot_imgspot_img
spot_imgspot_img

ನಳಿನ್ ಕುಮಾರ್ – ಕಮಲ ರಾಜಕುಮಾರ, ಸಾಮಾನ್ಯ ಕಾರ್ಯಕರ್ತನಿಂದ ರಾಜ್ಯಾಧ್ಯಕ್ಷನಾಗುವವರೆಗೆ.

- Advertisement -G L Acharya panikkar
- Advertisement -

ಲೇಖನ: ಜಿತೇಂದ್ರ ಕುಂದೇಶ್ವರ

15 ವರ್ಷಗಳ ಹಿಂದಿನ ವಿಚಾರ. ಸಪೂರ ದೇಹ, ಇನ್‌ಶರ್ಟ್ ಮಾಡಿಕೊಂಡು ಸ್ಕೂಟರ್‌ನಲ್ಲಿ ಬೈಠಕ್ ಗೆ, ಕಾರ್ಯಕ್ರಮಗಳಿಗೆ ತೆರಳುತ್ತಿದ್ದ ಸಾಮಾನ್ಯ ಕಾರ್ಯಕರ್ತ ನಳಿನ್ ಕುಮಾರ್ ಕಟೀಲ್ ಇಂದು ನಂ.1 ಸಂಸದ. ಅದಕ್ಕಿಂತಲೂ ಹೆಚ್ಚಾಗಿ ರಾಷ್ಟ್ರೀಯ ಪಕ್ಷದ ಆದೂ ಆಡಳಿತ ನಡೆಸುವ ಪಕ್ಷ ಬಿಜೆಪಿಯ ರಾಜ್ಯಾಧ್ಯಕ್ಷ.

ಹಳ್ಳಿಯ ಒಬ್ಬ ಸಾಮಾನ್ಯ ಕಾರ್ಯಕರ್ತರಾಗಿ ಸದಾ ಕಾರ್ಯಕರ್ತರ ನಡುವೆಯೇ ಇರುತ್ತಿದ್ದ ಸರಳ ಸಜ್ಜನ, ನಿಗರ್ವಿ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷ ಸ್ಥಾನ ಸುಲಭದಲ್ಲಿ ದಕ್ಕಿಲ್ಲ. ಅವರು ಇದುವರೆಗೆ ಸಾಗಿ ಬಂದ ಸಾಧನೆ ಹಾದಿ ಸರಳವೂ ಅಲ್ಲ. ಆರ್‌ಎಸ್‌ಎಸ್‌ನ ಪೂರ್ಣಾವಧಿ ಪ್ರಚಾರಕರಾಗಿ 12 ವರ್ಷಗಳ ಕಾಲ ಸಂಘಟನೆಗಾಗಿ ದುಡಿದಿರುವ ನಳಿನ್, ಪ್ರಖರ ಹಿಂದುತ್ವವಾದಿ, ಸಮರ್ಥ ಸಂಘಟಕ. ನಳಿನ ಅಂದರೆ ಸಂಸ್ಕೃತದಲ್ಲಿ ಕಮಲ ಎಂದರ್ಥ. ನಿಜಾರ್ಥದಲ್ಲಿ ನಳಿನ್ ಕುಮಾರ ಬೆಳೆದು ಇದೀಗ ಕಮಲದ ರಾಜಕುಮಾರನೇ ಆಗಿರುವುದು ವಿಶೇಷ.

ಕಟೀಲು ನಡ್ಯೋಡಿಗುತ್ತು ದಿ. ನಿರಂಜನ ಶೆಟ್ಟಿ ಮತ್ತು ಎನ್. ಸುಶೀಲಾವತಿ ಶೆಟ್ಟಿ ದಂಪತಿಯ ಪುತ್ರ ನಳಿನ್ ಕುಮಾರ್ ಕಟೀಲ್‌ರವರ ಹುಟ್ಟೂರು ಪುತ್ತೂರು ತಾಲೂಕು ಪಾಲ್ತಾಡಿ ಗ್ರಾಮದ ಕುಂಜಾಡಿ. ಸುಳ್ಯ ಪೆರುವಾಜೆ ಮುಕ್ಕೂರು ಶಾಲೆಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಹಾಗೂ ವಿಟ್ಲ ಮತ್ತು ಪುತ್ತೂರು ಫಿಲೋಮಿನಾ ವಿದ್ಯಾಸಂಸ್ಥೆಯಲ್ಲಿ ತನ್ನ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ್ದರು. 18ನೇ ವಯಸ್ಸಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿ ಸಾಮಾಜಿಕ ಜೀವನದ ರಂಗಪ್ರವೇಶ ಮಾಡಿದರು. ಸಂಘದ ತಾಲೂಕು ಕಾರ್ಯವಾಹನಾಗಿ ಜವಾಬ್ದಾರಿ ನಿರ್ವಹಿಸಿದ್ದರು. ತನ್ನ ತಂದೆಯ ಮರಣಾನಂತರ 1991ರಿಂದ ಕಟೀಲಿನ ಕೊಡೆತ್ತೂರು ನಡ್ಯೋಡಿಗುತ್ತು ಮನೆಯ ಜವಾಬ್ದಾರಿಯನ್ನು ಹೊತ್ತು ಕೃಷಿ ಕ್ಷೇತ್ರದಲ್ಲಿಯೂ ಕೈ ಆಡಿಸಿದರು. ಬದುಕು ನಿರ್ವಹಣೆಗಾಗಿ ಹೆಸರಿಗಷ್ಟೇ ಕಟ್ಟಡ ಗುತ್ತಿಗೆದಾರರಾಗಿ ಕೆಲಸ ಮಾಡಿದರು. ಧರ್ಮಜಾಗರಣ ವಿಭಾಗ ಜವಾಬ್ದಾರಿಯನ್ನೂ ನಿರ್ವಹಿಸಿ ಅಯೋಧ್ಯಾ ಆಂದೋಲನದಲ್ಲಿ ಭಾಗಿಯಾಗಿದರು.

ಇವರ ಶಕ್ತಿ #ವಾಕ್ಪುಟುತ್ವ #ಸಂಘಟನಾಶಕ್ತಿ ಮತ್ತು #ನಾಯಕತ್ವಗುಣ. ತನ್ನ 17ನೇ ವರ್ಷದಲ್ಲಿಯೇ ಪಾಲ್ತಾಡಿ ಮಂಜುನಾಥನಗರದಲ್ಲಿ ಸಿದ್ದಿ ವಿನಾಯಕ ಸೇವಾ ಸಮಿತಿ ರಚಿಸಿ ಈ ಮೂಲಕ ಗಣೇಶೋತ್ಸವ ಶುರು ಮಾಡಿದರು. ಭಜನಾ ಮಂದಿರ, ಶಿಕ್ಷಣ ಸಂಸ್ಥೆ, ಸ್ವಸಹಾಯ ಸಂಘ ರಚಿಸಿ ಗ್ರಾಮೋದ್ಧಾರದ ಕೆಲಸ ಮಾಡಿದರು. ಗುರುಪುರ ಕೈಕಂಬದಲ್ಲಿ ಮಿತ್ರರ ಜತೆ ಸೇರಿ ಮಾತೃ ಭೂಮಿ ಸೊಸೈಟಿ ಸ್ಥಾಪನೆ ಮಾಡಿದ್ದರು. ಬಡವರಿಗೆ ನೆರವಾಗಲು ಉಚಿತ ಆಂಬುಲೆನ್ಸ್ ಸೇವೆ, ಸಂಸ್ಕಾರ ಸೇವೆ, ಶಿಕ್ಷಣ ಆರೋಗ್ಯ ಕ್ಷೇತ್ರ ಹೀಗೆ ಸ್ತುಪ್ತವಾಗಿ ಸೇವೆ ಮಾಡುತ್ತಾ ಬಂದವರು ನಳಿನ್.

ಆರ್‌ಎಸ್‌ಎಸ್ ಸೂಚನೆಯಂತೆ 2004ರಲ್ಲಿ ರಾಜಕೀಯ ರಂಗಪ್ರವೇಶಿಸಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿದರು. ಚುನಾವಣೆಗಳಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡಿ ಅನುಭವ ಪಡೆದವರು.

ಮಹಾ ಧಾರ್ಮಿಕರಾದ ನಳಿನ್ ಅಪ್ಪಟ ಸಸ್ಯಾಹಾರಿ. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಸನ್ನಿಧಿಯಲ್ಲಿ 22 ವರ್ಷಗಳ ಬಳಿಕ ನಡೆದ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದರು. ಪಾವಂಜೆ ಸೌತ್ರಾಮಣಿ ಗವಾಮಯನ ಯಾಗ ಸಮಿತಿ ಕಾರ್ಯಾಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡು ರಾಜ್ಯದಲ್ಲಿಯೇ ಅತಿದೊಡ್ಡ ವಿಶಿಷ್ಟಯಾಗವೆಂಬ ಕೀರ್ತಿ ಗಳಿಸಿದ್ದರು. 12 ವರ್ಷದಲ್ಲಿ ವಾಜಪೇಯ ಸೋಮಯಾಗ ಸಹಿತ ಕಾಲ ಕಾಲಕ್ಕೆ ನಾಲ್ಕು ಪ್ರಮುಖ ಯಾಗಗಳನ್ನು ಮಾಡಿಸಿ ಪುಣ್ಯ ಸಂಪಾದನೆ ಮಾಡಿದವರು.

ಲೋಕನಾಯಕ : ವಿಶೇಷ ಎಂದರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯೂ ಸ್ಪರ್ಧಿಸದೇ ನೇರವಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಥಮ ಪ್ರವೇಶದಲ್ಲಿಯೇ ಭರ್ಜರಿ ಗೆದ್ದು ಕಾಂಗ್ರೆಸ್ ನ ಹಿರಿಯ ನಾಯಕ ಜನಾರ್ದನ ಪೂಜಾರಿಯಂತವರನ್ನೇ ಸೋಲಿಸಿ ಜೈಂಟ್ ಕಿಲ್ಲರ್ ಎನಿಸಿಕೊಂಡವರು. ರಾಮಜನ್ಮಭೂಮಿ ಅಯೋಧ್ಯಾ ಆಂದೋಲನದಲ್ಲಿ ಪ್ರಮುಖ ಹೊಣೆ ಹೊತ್ತುಕೊಂಡವರು.

ಸಾಮಾಜಿಕ ಹೋರಾಟ, ಪರಿಸರ ಹೋರಾಟದಲ್ಲೂ ಕಾಣಿಸಿಕೊಂಡ ನಳಿನ್ ಕುಮಾರ್ ಕಟೀಲ್, ಎತ್ತಿನ ಹೊಳೆ ಉಳಿಸಿ ಹೋರಾಟ, ಕಡಂದಲೆ ಪರಿಸರ ಉಳಿಸಿ ಹೋರಾಟದಲ್ಲಿ ಸಕ್ರಿಯರಾದವರು. ಕಿನ್ನಿಗೋಳಿ ರೈತ ಹಿತರಕ್ಷಣಾ ವೇದಿಕೆ ರಚಿಸಿ ರೈತಪರ ಹೋರಾಟ, ಕಟೀಲಿನ ಪರಿಸರದಲ್ಲಿ ನಾಗರಿಕ ಸಮಿತಿ ರಚಿಸಿ ಪರಿಸರ ರಕ್ಷಣೆ ಮತ್ತು ಮದ್ಯ ಮಾರಾಟ ನಿಷೇಧಕ್ಕಾಗಿ ಹೋರಾಟ ಸಂಘಟಿಸಿ, ಎಲ್ಲದರಲ್ಲಿಯೂ ನಳಿನ್ ಮುಂಚೂಣಿಯಲ್ಲಿದ್ದವರು.

ದಣಿವರಿಯದೆ ಸತತವಾಗಿ ಕೆಲಸ ಮಾಡುವ ನಳಿನ್ ಸಂಘಟನೆಗಾಗಿ ಪ್ರವಾಸ ಮಾಡುವುದು ಇಷ್ಟದ ಕೆಲಸ. ಎರಡನೇ, ಮೂರನೇ ಬಾರಿಯೂ ಲೋಕಸಭೆಗೆ ಟಿಕೆಟ್ ಕೊಡುವಾಗ ಬೇಡ ಎಂದೇ ಹೇಳಿದ್ದರು.ಸುಳ್ಯ ವಿಧಾನಸಭಾ ಕ್ಷೇತ್ರದ ಬಳ್ಪದಲ್ಲಿ ಆದರ್ಶ ಗ್ರಾಮ ಯೋಜನೆ, ಬಡವರಿಗೆ ಅಡುಗೆ ಅನಿಲ ಸಂಪರ್ಕ ನೀಡುವಲ್ಲಿ, ಮುದ್ರಾ ಯೋಜನೆ ಸೇರಿದಂತೆ ಕೇಂದ್ರದ ಹತ್ತು ಹಲವು ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾರಿಗೆ ತಂದರು.

ಡಿ.ವಿ.ಸದಾನಂದ ಗೌಡರ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯುವರು ಎರಡನೇ ಬಾರಿಗೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಪಡೆದ ದಾಖಲೆ ನಳಿನ್ ಅವರಿಗಿದೆ. ಡಿ.ವಿ.ಸದಾನಂದ ಗೌಡರು ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಇಬ್ಬರೂ ಕೂಡಾ ಜಿಲ್ಲೆಯ ಸುಳ್ಯ ತಾಲೂಕಿನ ವಿಶಿಷ್ಟ ಸಂಬಂಧ ಬೆಸೆದಿರುವುದು ವಿಶೇಷ.

ಸಂಸಾರ: ಶ್ರೀದೇವಿ ಶೆಟ್ಟಿ ಅವರನ್ನು ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.

ಗವಾಮಯನಯಾಗದಿಂದನಳನಳಿನಿಸಿದ_ನಳಿನ್ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಈ ಯಾಗ ನಡೆಯುವರೆಗೆ ಈ ಯಾಗದ ಹೆಸರು ಯಾರು ಕೇಳಿರಲಿಕ್ಕಿಲ್ಲ. ಅದುವರೆಗೆ ಜನಸಾಮಾನ್ಯರಿಗೂ ನಳಿನ್ ಕುಮಾರ್ ಕಟೀಲ್ ಪರಿಚಯ ಅಷ್ಟಾಗಿ ಇರಲಿಲ್ಲ. ನಳಿನ್ ಕುಮಾರ್ ಕಟೀಲ್ ಮಾಡಿಸಿದ ಆ ಮಹಾಯಾಗ ರಾಜಯೋಗ ಸಿದ್ಧಿಸುವ ಸೌತ್ರಾಮಣಿ ಗವಾಮಯನ ಯಾಗ. 2007 ರ ಡಿಸೆಂಬರ್ 9ರಿಂದ 16ರ ತನಕ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮಂಗಳೂರಿನ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ 2 ಕೋಟಿ ರು. ವೆಚ್ಚದಲ್ಲಿ ಸಂಪನ್ನಗೊಂಡಿತ್ತು. ರಾಜಯೋಗ ಸಿದ್ಧಿಸುವ ಸೌತ್ರಾಮಣಿ ಗವಾಮಯನ ಯಾಗ ನಳಿನ್ ಕುಮಾರ್ ನೇತೃತ್ವದಲ್ಲಿ ಮಾಡಿದ್ದು ಆ ಯಾಗದ ಫಲವಾಗಿ ನಳಿನ್ ಉನ್ನತ ಸ್ಥಾನ ಗಳಿಸಿದ್ದಾರೆ. ಸದ್ಯ ರಾಜ್ಯಾಧ್ಯಕ್ಷ ಸ್ಥಾನ ಗಳಿಸಿದ್ದು ಇದಕ್ಕೆ ಯಾಗದ ಪುಣ್ಯ ಪ್ರಾಪ್ತಿಯೇ ಕಾರಣ ಎನ್ನುವುದು ಆಸ್ತಿಕರ ನಂಬಿಕೆ..ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೂಡಾ ಈ ಯಾಗದಲ್ಲಿ ಭಾಗವಹಿಸಿದ್ದು, ಅಂದು ತಳಮಟ್ಟದ ಕಾರ್ಯಕರ್ತಾಗಿದ್ದ ನಳಿನ್ ಕುಮಾರ್ ಕಟೀಲ್ ಇಂದು ರಾಜ್ಯಾಧ್ಯಕ್ಷ ರಾಗುವ ಕಾಲದಲ್ಲೂ ಯಡಿಯೂರಪ್ಪ ಮುಖ್ಯಮಂತ್ರಿಯೇ ಆಗಿರುವುದು ವಿಶೇಷ.

ನಳಿನ್_ವೈಶಿಷ್ಟ್ಯಗಳು

17 ನೇ ವರ್ಷಕ್ಕೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ರಚನೆ

18 ನೇ ವರ್ಷಕ್ಕೆ ಆರ್‌ಎಸ್‌ಎಸ್ ಪ್ರಚಾರಕ

5 ವರ್ಷ ಆರ್‌ಎಸ್‌ಎಸ್ ತಾಲೂಕು ಕಾರ್ಯವಾಹಕ

5 ವರ್ಷ ಧರ್ಮ ಜಾಗರಣ್ ವಿಭಾಗದ ಸಂಚಾಲಕರಾಗಿ ಕಾರ್ಯನಿರ್ವಹಣೆ

2009 ರಲ್ಲಿ 42೦೦೦ ಮತಗಳಿಂದ ಜನಾರ್ದನ ಪೂಜಾರಿಯನ್ನು ಸೋಲಿಸಿ ಮೊದಲ ಬಾರಿಗೆ ಲೋಕಸಭೆ ಪ್ರವೇಶ

2014 ರಲ್ಲಿ 1,45,709 ಮತಗಳ ಅಂತರದಲ್ಲಿ ಜಯಗಳಿಸಿ ಲೋಕಸಭೆಗೆ ಮರು ಆಯ್ಕೆ

16 ನೇ ಲೋಕಸಭೆಯ ಅತ್ಯುತ್ತಮ ಸಂಸದ ( ಟೈಮ್ಸ್ ಸಮೀಕ್ಷೆ)

2019 ರಲ್ಲಿ 2,45,621 ಮತಗಳಿಂದ ಗೆದ್ದು ಸತತ ಮೂರನೇ ಅವಧಿಗೆ ಸಂಸದ

ಸಂಸದ ಆದರ್ಶ ಗ್ರಾಮ ಯೋಜನೆ ಅಡಿ ಗ್ರಾಮಗಳ ಅಭಿವೃದ್ಧಿ ಮಾಡಿದ ನಂಬರ್ 1 ಸಂಸದ (ಮೈಸೂರು ವಿವಿ ಸಮೀಕ್ಷೆ )

ವಿವಿಧ ಯೋಜನೆಗಳ ಮೂಲಕ ಕೇಂದ್ರ ಸರಕಾರದಿಂದ ಅತೀ ಹೆಚ್ಚು ಅನುದಾನ ತಂದ ಸಂಸದ ಎಂಬ ಖ್ಯಾತಿ ನಳಿನ್ ಕುಮಾರ್ ಕಟೀಲ್ ಅವರದ್ದು.

ಲೇಖನ: ಜಿತೇಂದ್ರ ಕುಂದೇಶ್ವರ

- Advertisement -

Related news

error: Content is protected !!