




ನವದೆಹಲಿ: ವೇಗವಾಗಿ ಬಂದ ಡಬಲ್ ಡೆಕ್ಕರ್ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನವದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ಸಂಭವಿಸಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 23 ಮಂದಿ ಗಾಯಗೊಂಡಿದ್ದಾರೆ.
ರಾಜಸ್ಥಾನದ ಜೈಪುರದಿಂದ ಬರುತ್ತಿದ್ದ ಖಾಸಗಿ ಡಬಲ್ ಡೆಕ್ಕರ್ ಸ್ಲೀಪರ್ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ಸಿನಲ್ಲಿ ಸುಮಾರು 25 ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ. ಚಾಲಕನ ಅತಿ ವೇಗ ಮತ್ತು ನಿಯಂತ್ರಣ ತಪ್ಪಿರುವುದು ಅಪಘಾತಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ.
ಬಸ್ ರಸ್ತೆಯ ಮಧ್ಯೆದಲ್ಲೇ ಉರುಳಿ ಬಿದ್ದಿದ್ದೆ. ಪ್ರಸಿದ್ಧ ಝಂಡೆವಾಲನ್ ದೇವಸ್ಥಾನದಲ್ಲಿ ಪ್ರಸ್ತುತ ನವರಾತ್ರಿ ಉತ್ಸವದ ಆಚರಣೆಗಳು ನಡೆಯುತ್ತಿದ್ದು, ದೇವಸ್ಥಾನಕ್ಕೆ ಭಕ್ತರ ಆಗಮನದ ವೇಳೆಯೇ ಈ ಘಟನೆ ನಡೆದಿದೆ. ಈ ಅಪಘಾತ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ ಎನ್ನಲಾಗಿದೆ.
ಬಸ್ ಪಲ್ಟಿಯಾದ ಶಬ್ದ ಕೇಳಿ ಸ್ಥಳೀಯರು ಮತ್ತು ದೇವಸ್ಥಾನದ ಬಳಿ ಇದ್ದ ಭಕ್ತರು ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡಗಳು ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಗಾಯಗೊಂಡ 23 ಪ್ರಯಾಣಿಕರನ್ನು ತಕ್ಷಣವೇ ಸಮೀಪದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.








