Friday, March 29, 2024
spot_imgspot_img
spot_imgspot_img

ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ, ಯಾವುದೇ ತನಿಖೆಯೂ ಬೇಕಿಲ್ಲ: ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್.

- Advertisement -G L Acharya panikkar
- Advertisement -

ಬೆಂಗಳೂರು: ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದಿಂದ ಎಳ್ಳಷ್ಟೂ ಲೋಪ ಆಗಿಲ್ಲ. ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ. ಈ ಕುರಿತು ತನಿಖೆ ನಡೆಯಬೇಕಾದ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.

ವಿಧಾನಸಭೆಯಲ್ಲಿ ಇಂದು ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದ ಸಚಿವರು, “ವೈದ್ಯೋಪಕರಣಗಳ ಕೊರತೆ ಇದ್ದಾಗ ದರ ಹೆಚ್ಚಿರುತ್ತದೆ. ಜುಲೈನಲ್ಲಿ ಕಡಿಮೆ ದರದಲ್ಲಿ ಎಂದರೆ, 575 ರೂ.ಗೆ ಪಿಪಿಇ ಕಿಟ್ ಖರೀದಿ ಮಾಡಿದ್ದೆವು. ಹೆಚ್ಚು ದರಕ್ಕೆ ಖರೀದಿ ಮಾಡುವುದಾದರೆ ಪ್ರತಿ ತಿಂಗಳಲ್ಲೂ ಅಧಿಕ ದರಕ್ಕೆ ಖರೀದಿಸಬೇಕಿತ್ತು. ಮೊದಲು ಕೊರತೆ ಇದ್ದಾಗ, 3 ಲಕ್ಷ ಪಿಪಿಇ ಕಿಟ್ ಗಳನ್ನು ಚೀನಾದಿಂದ ತರಿಸಲಾಗಿತ್ತು. ನಂತರ ಐಸಿಎಂಆರ್ ಮಾನ್ಯತೆ ಪಡೆದ ಪಿಪಿಇ ಕಿಟ್‍ಗಳನ್ನು ಖರೀದಿಸಲಾಯಿತು. ಮೊದಲು ಸ್ಯಾನಿಟೈಜರ್ ಕೊರತೆ ಇತ್ತು. ಡಿಸ್ಟಿಲರಿಗಳ ಪ್ರತಿನಿಧಿಗಳನ್ನು ಕರೆಸಿ ಚರ್ಚಿಸಿದ ಬಳಿಕ, ಸ್ಯಾನಿಟೈಜರ್ ಕೊರತೆ ಕಡಿಮೆಯಾಯಿತು. ಎಲ್ಲ ರಾಜ್ಯಗಳಲ್ಲೂ ಇದೇ ರೀತಿ ನಡೆದಿದೆ” ಎಂದು ಸ್ಪಷ್ಟಪಡಿಸಿದರು

“ರಾಜ್ಯದಲ್ಲಿ ಏಪ್ರಿಲ್ 9 ರ ವೇಳೆಗೆ 5,665 ಹಾಸಿಗೆಗಳ 31 ಕೋವಿಡ್ ಆಸ್ಪತ್ರೆ, 801 ಐಸಿಯು ಹಾಸಿಗೆ ಹಾಗೂ 372 ವೆಂಟಿಲೇಟರ್ ಗಳ ವ್ಯವಸ್ಥೆ ಮಾಡಲಾಗಿತ್ತು. ಆರೋಗ್ಯ ಇಲಾಖೆಯ ಆಸ್ಪತ್ರೆಗಳಲ್ಲಿ ಮೊದಲು 3,215 ಆಕ್ಸಿಜನ್ ಹಾಸಿಗೆಗಳಿದ್ದು, ನಂತರ ಹೆಚ್ಚುವರಿಯಾಗಿ 15,830 ಹಾಸಿಗೆ ಅಳವಡಿಸಿ ಒಟ್ಟು ಆಕ್ಸಿಜನ್ ಹಾಸಿಗೆ ಸಂಖ್ಯೆಯನ್ನು 19,045 ಕ್ಕೆ ಏರಿಸಲಾಯಿತು. ಮೊದಲಿದ್ದ ಸೌಲಭ್ಯಕ್ಕೆ ಹೋಲಿಸಿದರೆ ಆಕ್ಸಿಜನ್ ಹಾಸಿಗೆಗಳ ಸಂಖ್ಯೆ 6 ಪಟ್ಟು ಹೆಚ್ಚಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಡಿಯ ಆಸ್ಪತ್ರೆಗಳಲ್ಲಿ ಮೊದಲಿಗೆ 4,360 ಆಕ್ಸಿಜನ್ ಹಾಸಿಗೆಗಳಿದ್ದು, ನಂತರ ಹೆಚ್ಚುವರಿಯಾಗಿ 4,735 ಹಾಸಿಗೆ ಅಳವಡಿಸಿ, ಒಟ್ಟು ಆಕ್ಸಿಜನ್ ಹಾಸಿಗೆ ಸಂಖ್ಯೆಯನ್ನು 9,095 ಕ್ಕೆ ಏರಿಸಲಾಯಿತು. ಮೊದಲಿದ್ದ ಸೌಲಭ್ಯಕ್ಕೆ ಹೋಲಿಸಿದರೆ, ಹಾಸಿಗೆ ಸಂಖ್ಯೆ 2 ಪಟ್ಟು ಹೆಚ್ಚಿದೆ. ಅಂದರೆ, ಕೋವಿಡ್ ಗೆ ಮೊದಲು ಎರಡೂ ಇಲಾಖೆಗಳಡಿಯ ಆಸ್ಪತ್ರೆಗಳಲ್ಲಿ ಒಟ್ಟು 7,575 ಆಕ್ಸಿಜನ್ ಹಾಸಿಗೆಗಳಿದ್ದು, ನಂತರ 20,565 ಹಾಸಿಗೆ ಅಳವಡಿಸಿ, ಒಟ್ಟು ಸಂಖ್ಯೆಯನ್ನು 28,140 ಕ್ಕೆ ಹೆಚ್ಚಿಸಲಾಯಿತು. ರಾಜ್ಯದಲ್ಲಿ ಒಟ್ಟಾರೆಯಾಗಿ, ಆಕ್ಸಿಜನ್ ಹಾಸಿಗೆ ಸಂಖ್ಯೆ 4 ಪಟ್ಟು ಹೆಚ್ಚಿದೆ” ಎಂದು ವಿವರಿಸಿದರು.

“ಕೋವಿಡ್ ನಿರ್ವಹಣೆಯಲ್ಲಿ ಯಾವ ರಾಜ್ಯದಲ್ಲೂ ಈ ರೀತಿ ಭ್ರಷ್ಟಾಚಾರದ ಆರೋಪ ಮಾಡಿಲ್ಲ. ಈ ಕುರಿತು ನ್ಯಾಯಾಲಯ, ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಾಗಿರುವುದರಿಂದ ಅಧಿಕಾರಿಗಳು ದಾಖಲೆ ನೀಡಲು ಅಲೆಯುವಂತಾಗಿದೆ. ನಾವು ಮೊದಲು ಕೋವಿಡ್ ಸೋಂಕನ್ನು ಮಣಿಸಬೇಕು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು” ಎಂದರು.

“ಗೃಹ ವೈದ್ಯರಿಗೆ 30,000 ರೂ., ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 45,000 ರೂ., ಫೆಲೋಶಿಪ್ ವಿದ್ಯಾರ್ಥಿಗಳಿಗೆ 60,000 ರೂ. ಸೇರಿದಂತೆ ವೈದ್ಯಕೀಯ ವಿದ್ಯಾರ್ಥಿಗಳ ಶಿಷ್ಯವೇತನವನ್ನು ಶೇ.40 ರಿಂದ ಶೇ.45 ರಷ್ಟು ಹೆಚ್ಚಿಸಲಾಗಿದೆ. ವಾರ್ಷಿಕ 137 ಕೋಟಿ ರೂ. ವೆಚ್ಚದಲ್ಲಿ 2,500 ವೈದ್ಯಕೀಯ ಬೋಧಕ ಸಿಬ್ಬಂದಿಗೆ 7 ನೇ ವೇತನ ಆಯೋಗದ ಅನ್ವಯ ವೇತನ ಪರಿಷ್ಕರಿಸಲಾಗಿದೆ” ಎಂದು ತಿಳಿಸಿದರು.

“ಕಳೆದ ಏಳು ತಿಂಗಳಿಂದ ನಾವು ಮೈ ಮರೆತಿಲ್ಲ. ಅನೇಕ ಅಧಿಕಾರಿಗಳು ರಜೆ ಪಡೆಯದೆ ಕೆಲಸ ಮಾಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಕರ್ನಾಟಕ ಒಂದು ಮಾದರಿಯಾಗಿತ್ತು. ಕಾರ್ಮಿಕರ, ಬಡಜನರ ಸಂಕಷ್ಟ ನೋಡಿ ಲಾಕ್ ಡೌನ್ ಅನ್ನು ಹಂತಹಂತವಾಗಿ ತೆರವು ಮಾಡಲಾಯಿತು. ಈ ಹಂತದಲ್ಲಿ ಸೋಂಕು ಹೆಚ್ಚಿದ್ದ ಮಹಾರಾಷ್ಟ್ರ, ನವದೆಹಲಿ ರಾಜ್ಯಗಳಿಂದ ಜನರು ಬಂದಾಗ ಸೋಂಕಿತರ ಸಂಖ್ಯೆ ಹೆಚ್ಚಿತು” ಎಂದು ಸ್ಪಷ್ಟಪಡಿಸಿದರು.

- Advertisement -

Related news

error: Content is protected !!