

ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಟವರ್ ಗಳ ಬ್ಯಾಟರಿಗಳನ್ನು ಮತ್ತು ಕಂಪೌಂಡ್ ಗೇಟ್ ಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಮುಲ್ಕಿ ಪೊಲೀಸರು ಅರೆಸ್ಟ್ ಮಾಡಿ, ಕಳ್ಳತನ ಮಾಡಿದ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಕೇರಳ ಕೊಲ್ಲಂ ಜಿಲ್ಲೆಯ ಇಟ್ಟಿ ಪನಿಕರ್(58) ಎಂದು ಗುರುತಿಸಲಾಗಿದೆ.
ಆರೋಪಿ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಎರ್ ಟೆಲ್ ಕಂಪೆನಿಯ ಮೊಬೈಲ್ ಟವರ್ ಗಳಲ್ಲಿರುವ ಬ್ಯಾಟರಿಗಳನ್ನು ಕಳ್ಳತನ ಮಾಡಿದ್ದ ಅಲ್ಲದೆ ಐಕಳ ಗ್ರಾಮದ ನೆಲ್ಲಿಗುಡ್ಡೆ ಕ್ರಾಸ್ ಎಂಬಲ್ಲಿ ಜಾಗಕ್ಕೆ ಅಳವಡಿಸಿರುವ 5 ಕಬ್ಬಿಣದ ಗೇಟ್ ಗಳನ್ನು ಕದ್ದೊಯ್ದಿದ್ದ, ಈ ಕುರಿತಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ 3 ಪ್ರತ್ಯೇಕ ಪ್ರಕರಣಗಳು ದಾಖಲಾಗಿರುತ್ತದೆ.
ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಯಿಂದ 39 ಬ್ಯಾಟರಿಗಳನ್ನು ಮತ್ತು ಕಬ್ಬಿಣದ ಕಂಪೌಂಡ್ ಗೇಟ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಆರೋಪಿಯಿಂದ ಮೊಬೈಲ್ ಟವರ್ ಗೆ ಸಂಬಂಧಿಸಿದ ಅಂದಾಜು 2,56,000 ರೂ. ಮೌಲ್ಯದ 39 ಬ್ಯಾಟರಿಗಳು, ಅಂದಾಜು 52,000 ರೂ. ಮೌಲ್ಯದ 3 ಕಬ್ಬಿಣದ ಗೇಟ್ ಗಳು, ಅಂದಾಜು 5,00,000 ರೂ. ಮೌಲ್ಯದ ಕಳವು ಸೊತ್ತುಗಳನ್ನು ಸಾಗಾಟ ಮಾಡಲು ಉಪಯೋಗಿಸಿದ ಪಿಕ್ ಅಪ್ ಗೂಡ್ಸ್ ಟೆಂಪೋವನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ. ಈ ಮೂಲಕ ಸ್ವಾದೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 8,08,000 ರೂ. ಆಗಿರುತ್ತದೆ.
ಆರೋಪಿಯ ಪತ್ತೆ ಕಾರ್ಯವು ಮಂಗಳೂರು ನಗರ ಮಾನ್ಯ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್, ಐ.ಪಿ.ಎಸ್ ರವರ ಮಾರ್ಗದರ್ಶನದಂತೆ, ಕಾನೂನು & ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ ಗೋಯಲ್ ಐ.ಪಿ.ಎಸ್ ಮತ್ತು ಅಪರಾಧ & ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ನಿರ್ದೇಶನದಂತೆ, ಮಂಗಳೂರು ಉತ್ತರ ವಿಭಾಗದ ಎ.ಸಿ.ಪಿ. ಮನೋಜ್ ಕುಮಾರ್ ಮತ್ತು ಮುಲ್ಕಿ ಶಾಣಾ ನಿರೀಕ್ಷಕರಾದ ವಿದ್ಯಾಧರ ಡಿ ಬಾಮ್ಮೇರಿಕರ್ ಮತ್ತು ಪಿ.ಎಸ್.ಐ. ವಿನಾಯಕ ಭಾವಿಕಟ್ಟಿ ರವರ ನೇತೃತ್ವದಲ್ಲಿ ನಡೆದಿದೆ. ಈ ಆರೋಪಿ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಮುಲ್ಕಿ ಪೊಲೀಸ್ ಠಾಣೆಯ ಎ.ಎಸ್.ಐ. ಸಂಜೀವ ಎ.ಪಿ, ಹೆಡ್ ಕಾನ್ ಸ್ಟೇಬಲ್ ಕಿಶೋರ್ ಕೋಟ್ಯಾನ್, ಮಹೇಶ್, ಶಶಿಧರ, ಚಂದ್ರಶೇಖರ್, ವಿಶ್ವನಾಥ, ವಿರೇಶ್ ಕಾನ್ ಸ್ಟೇಬಲ್ ಗಳಾದ ಅರುಣ್ ಕುಮಾರ್, ಸುನೀಲ್ ಮತ್ತು ಮ.ಪಿ.ಸಿ. ಚಿತ್ರಾ ರವರು ಸಹಕರಿಸಿರುತ್ತಾರೆ.








