



ಸಿಯೋಲ್: 181 ಜನ ಪ್ರಯಾಣಿಕರಿದ್ದ ವಿಮಾನವು ಲ್ಯಾಂಡಿಂಗ್ ಗೇರ್ ವೈಫಲ್ಯದಿಂದಾಗಿ ಲಾಂಡಿಂಗ್ ವೇಳೆ ಪತನಗೊಂಡ ಘಟನೆ ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಈ ಅಪಘಾತದಲ್ಲಿ ಕನಿಷ್ಠ 29 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಜಿಯೋಲ್ಲಾ ಪ್ರಾಂತ್ಯದಲ್ಲಿ ಈ ಅವಘಡ ಸಂಭವಿಸಿದ್ದು, ಜೆಜು ಏರ್ ಫ್ಲೈಟ್ 2216 ಥೈಲ್ಯಾಂಡ್‌ನಿಂದ ಹಿಂದಿರುಗಿತ್ತು. ವಿಮಾನದಲ್ಲಿ 175 ಮಂದಿ ಪ್ರಯಾಣಿಕರು ಮತ್ತು 6 ಮಂದಿ ವಿಮಾನ ಸಿಬ್ಬಂದಿ ಸೇರಿ ಒಟ್ಟು 181 ಜನರಿದ್ದರು. ಲ್ಯಾಂಡಿಂಗ್ ಗೇರ್ ಸಮಸ್ಯೆಯಿಂದಾಗಿ ಅಪಘಾತ ಸಂಭವಿಸಿದೆ. ಹಕ್ಕಿಗಳಿಗೆ ವಿಮಾನ ಡಿಕ್ಕಿಯಾದ ಪರಿಣಾಮ ಲ್ಯಾಂಡಿಂಗ್ ಗೇರ್ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಲ್ಯಾಂಡಿಂಗ್ ವಿಫಲವಾದ ಬಳಿಕ ವಿಮಾನವು ನಿಲ್ದಾಣದ ತಡೆಗೋಡೆಗೆ ಅಪ್ಪಳಿಸಿದೆ. ಪರಿಣಾಮ ದೊಡ್ಡ ಸ್ಫೋಟ ಸಂಭವಿಸಿದೆ. ಘಟನೆಯ ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆ ವೇಳೆ ಓರ್ವ ಜೀವಂತವಾಗಿ ಪತ್ತೆಯಾಗಿದ್ದಾನೆ ಎಂದು ಮೂಲಗಳು ಹೇಳಿವೆ.