



ಪುತ್ತೂರು: ಮದುವೆಯಾಗುವುದಾಗಿ ವಂಚನೆ ಮಾಡಿದ ಪ್ರಕರಣದಲ್ಲಿ ಆರೋಪಿಯ ಸ್ಥಾನದಲ್ಲಿ ಮುಸ್ಲಿಮರು ಇದ್ದರೆ ತೀವ್ರವಾಗಿ ಪ್ರತಿಕ್ರಿಯಿಸುವ ಸಂಘಪರಿವಾರ ಹಾಗೂ ಹಿಂದು ಸಂಘಟನೆಗಳು, ಇಂದು ಹಿಂದು ಯುವತಿಗೆ ಅನ್ಯಾಯವಾಗಿರುವ ಸಂದರ್ಭದಲ್ಲಿ ಮೌನ ವಹಿಸಿರುವುದು ಖಂಡನೀಯ ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಆಕ್ರೋಶ ವ್ಯಕ್ತಪಡಿಸಿದರು.
ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಹಿಂದುತ್ವದ ಬಗ್ಗೆ ಮಾತನಾಡುವ ಬಿಜೆಪಿ ಮತ್ತು ಸಂಘಪರಿವಾರ ಸಂಘಟನೆಗಳು ಈ ಪ್ರಕರಣದಲ್ಲಿ ತಮ್ಮ ನಾಟಕವನ್ನು ಕೊನೆಗೊಳಿಸಬೇಕು. ನೊಂದ ಕುಟುಂಬದೊಂದಿಗೆ ನ್ಯಾಯಕ್ಕಾಗಿ ಯಾರೂ ಮುಂದೆ ಬರದಿದ್ದರೆ, ಎಸ್‌ಡಿಪಿಐ ಪರಿಪೂರ್ಣವಾಗಿ ಹೋರಾಟಕ್ಕೆ ಇಳಿಯಲಿದೆ. ಅಗತ್ಯವಿದ್ದರೆ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಪ್ರಕರಣದಲ್ಲಿ ಬಿಜೆಪಿ ಮುಖಂಡ ಪಿ.ಜಿ. ಜಗನ್ನಿವಾಸ ಅವರ ಪುತ್ರ ಶ್ರೀಕೃಷ್ಣ ಜೆ. ರಾವ್ ತಮ್ಮ ಸಹಪಾಠಿ ವಿದ್ಯಾರ್ಥಿನಿಗೆ ಮದುವೆಯಾಗುವ ಭರವಸೆ ನೀಡಿ ವಂಚಿಸಿದ್ದಾನೆ. ಆರಂಭದಲ್ಲಿ ಬಿಜೆಪಿ ಹಾಗೂ ಹಿಂದು ಸಂಘಟನೆಗಳು ನೊಂದ ಕುಟುಂಬದ ನೋವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಎಸ್‌ಡಿಪಿಐ ಪುತ್ತೂರು ನಗರಸಭೆ ಮುಂದೆ ಪ್ರತಿಭಟನೆ ನಡೆಸಿತ್ತು. ಆ ವೇಳೆ ನೊಂದ ವಿದ್ಯಾರ್ಥಿನಿಯ ತಾಯಿ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಆದರೆ ಇತರ ಪಕ್ಷಗಳ ಕುತಂತ್ರದಿಂದ ನಮ್ಮ ಮೇಲೆಯೇ ಪ್ರಕರಣ ದಾಖಲಾಗಿತ್ತು. ನಾವು ಪ್ರತಿಭಟನೆ ನಡೆಸಿದ ನಂತರ ಮೌನವಾಗಿದ್ದ ಸಂಘಪರಿವಾರದವರು ಓಡೋಡಿ ಬಂದು ನ್ಯಾಯ ಕೊಡಿಸುವ ಭರವಸೆ ನೀಡಿದರು. ಇದೀಗ ಮತ್ತೆ ಅವರು ಮೌನವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ನೊಂದ ಕುಟುಂಬದ ಜೊತೆಗೆ ದೃಢವಾಗಿ ನಿಲ್ಲಲಿದ್ದೇವೆ ಎಂದು ಎಸ್‌ಡಿಪಿಐ ಉಪಾಧ್ಯಕ್ಷ ಮೋನಿಷ್ ಆಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಮೌನೀಷ್ ಆಲಿ, ಜಿಲ್ಲಾ ಕಾರ್ಯದರ್ಶಿ ಅಶ್ರಫ್, ಪುತ್ತೂರು ವಿಧಾನಸಭಾ ಸಮಿತಿ ಅಧ್ಯಕ್ಷ ಅಶ್ರಫ್ ಬಾವು, ಸುಳ್ಯ ವಿಧಾನಸಭಾ ಸಮಿತಿ ಸದಸ್ಯ ಬಾಬು ಎನ್. ಸವಣೂರು ಹಾಗೂ ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.








