Sunday, November 10, 2024
spot_imgspot_img
spot_imgspot_img

“ಪ್ರಥಮ ಪಿಯುಸಿ ಪರೀಕ್ಷೆಗಳನ್ನು ಕೋವಿಡ್-19 ಹಿನ್ನೆಲೆಯಲ್ಲಿ ರದ್ದು-ಸಚಿವ ಎಸ್. ಸುರೇಶ್ ಕುಮಾರ್”

- Advertisement -
- Advertisement -

ಪುತ್ತೂರು: ಜುಲೈ 16 ರಿಂದ 27ರವರೆಗೆ ನಿಗದಿಯಾಗಿದ್ದ ಪ್ರಥಮ ಪಿಯುಸಿ ಪೂರಕ ಪರೀಕ್ಷೆಗಳನ್ನು ಕೋವಿಡ್-19 ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಸುಮಾರು 60 ಸಾವಿರ ವಿದ್ಯಾರ್ಥಿಗಳು ಈ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕಿದ್ದು ಕಾಲೇಜು ಹಂತದಲ್ಲಿ ಪರೀಕ್ಷೆಗಳನ್ನು ನಿರ್ವಹಿಸಿ ಜು. 30ರಂದು ಫಲಿತಾಂಶ ಪ್ರಕಟಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಕೋವಿಡ್ ಸೊಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳ ಪರೀಕ್ಷೆಯನ್ನು ಬರೆದು ಅನುತ್ತೀರ್ಣಗೊಂಡ ವಿದ್ಯಾರ್ಥಿಗಳನ್ನು ದ್ವಿತೀಯ ಪಿಯುಸಿಗೆ ತೇರ್ಗಡೆಗೊಳಿಸಲಾಗುವುದು. ಪರೀಕ್ಷೆಯಲ್ಲಿ ಉತ್ತೀರ್ಣತೆಯನ್ನು ಪಡೆಯಲು ಅವಶ್ಯಕತೆಯಿರುವ ಕನಿಷ್ಠ ಅಂಕಗಳನ್ನು ಕಾಲೇಜು ಹಂತದಲ್ಲಿಯೇ ನೀಡಲಾಗುವುದು. ಹಾಜರಾತಿ ಕೊರತೆಯಿಲ್ಲದ, ಅನಿವಾರ್ಯ ಸಂದರ್ಭದಲ್ಲಿ ಪರೀಕ್ಷೆಗೆ ಗೈರುಹಾಜರಾದ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗಳು ಪ್ರಾರಂಭವಾದ ಬಳಿಕ ದ್ವಿತೀಯ ಪಿಯುಸಿಯ ಪ್ರಥಮ ಕಿರುಪರೀಕ್ಷೆಗೂ ಪೂರ್ವದಲ್ಲಿ ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣವಾದ ವಿಷಯಗಳಿಗೆ ಮತ್ತೊಮ್ಮೆ ಕಾಲೇಜು ಹಂತದಲ್ಲಿ ಕಿರುಪರೀಕ್ಷೆಯನ್ನು ನಡೆಸಿ ಅವರ ಕಲಿಕೆಯ ಮಟ್ಟವನ್ನು ಮೌಲ್ಯಮಾಪನ ಮಾಡಲಾಗುವುದೆಂದು ಸಚಿವರು ಹೇಳಿದ್ದಾರೆ. ಹಾಜರಾತಿಯ ಕೊರತೆಯಿಂದ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಅನುಮತಿ ಪಡೆಯದ ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣಗೊಳ್ಳುವರು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಜು.20ರಿಂದ ದೂರದರ್ಶನದ ಚಂದನ ವಾಹಿನಿಯಲ್ಲಿ ಇ ಕ್ಲಾಸ್ : ಕೋವಿಡ್ ಸಂದರ್ಭದಲ್ಲಿ ಮಕ್ಕಳ ನಿರಂತರ ಕಲಿಕೆಗೆ ಯಾವುದೇ ಅಡಚಣೆಯುಂಟಾಗದಂತೆ ಕಲಿಕೆಯನ್ನು ಮುಂದುವರೆಸಲು, ಮಕ್ಕಳು ಮನೆಯಲ್ಲಿಯೇ ಇದ್ದರೂ ಕಲಿಕೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಜು. 20ರಿಂದ 20 ದಿನಗಳ ಅವಧಿಗೆ 8 ರಿಂದ 10ನೇ ತರಗತಿಯ ಮಕ್ಕಳಿಗೆ ಪ್ರಥಮ ಭಾಷೆ ಕನ್ನಡ, ಇಂಗ್ಲೀಷ್, ಸಂಸ್ಕೃತ, ಉರ್ದು, ದ್ವಿತೀಯ ಭಾಷೆ ಇಂಗ್ಲೀಷ್, ತೃತೀಯ ಭಾಷೆ ಹಿಂದಿ, ಕನ್ನಡ ಮಾಧ್ಯಮದಲ್ಲಿ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳಲ್ಲಿ ಸೇತುಬಂಧ ಕಾರ್ಯಕ್ರಮಗಳನ್ನು ದೂರದರ್ಶನದ ಚಂದನ ವಾಹಿನಿಯಲ್ಲಿ ಬಿತ್ತರಿಸಲಾಗುವುದೆಂದು ಸಚಿವ ಎಸ್. ಸುರೇಶ್ ಕುಮಾರ್‌ರವರು ಹೇಳಿದ್ದಾರೆ. 20 ದಿನಗಳ ಸೇತುಬಂಧ ತರಗತಿಗಳ ಬಳಿಕ 8ರಿಂದ 10ನೇ ತರಗತಿಗಳಿಗೆ ಕನ್ನಡ ಮಾಧ್ಯಮದಲ್ಲಿ ದೈನಂದಿನ ಬೋಧನೆ ಮುಂದುವರೆಯಲಿವೆ ಎಂದ ಸಚಿವರು ಮುಂದಿನ ದಿನಗಳಲ್ಲಿ 1ರಿಂದ 10ನೇ ತರಗತಿಯ ಎಲ್ಲಾ ಮಕ್ಕಳಿಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ವಿಡೀಯೋ ಪಾಠಗಳನ್ನು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ದೂರದರ್ಶನ ಚಂದನ ವಾಹಿನಿಯು ಪ್ರಸಾರ ಮಾಡಲಿದೆ ಎಂದು ಹೇಳಿದರು. ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಈ ಕಲಿಕೆಯ ಪ್ರಯೋಜನವನ್ನು ಪಡೆಯುವಲ್ಲಿ ಪ್ರೇರೇಪಿಸಬೇಕೆಂದು ಮನವಿ ಮಾಡಿದ ಸಚಿವರು ಶಿಕ್ಷಣ ಇಲಾಖೆಯ ಯುಟ್ಯೂಬ್ ವಾಹಿನಿಯಲ್ಲಿಯೂ ಸಹ ಈ ಎಲ್ಲಾ ತರಗತಿಗಳು ಲಭ್ಯವಿರಲಿದ್ದು ವಿದ್ಯಾರ್ಥಿಗಳು ಇದನ್ನು ಸದುಪಯೋಗ ಮಾಡಿಕೊಳ್ಳಬಹುದಾಗಿದೆ. ಈ ತರಗತಿಗಳ ಕಲಿಕೆಯನ್ನು ಮೌಲ್ಯಮಾಪನ ಮಾಡಲು ಪ್ರತಿ ೨೦ ವಿದ್ಯಾರ್ಥಿಗಳಿಗೆ ಒಬ್ಬ ಮೆಂಟರ್ ಶಿಕ್ಷಕರನ್ನು ಮ್ಯಾಪಿಂಗ್ ಮಾಡಲಾಗುತ್ತಿದ್ದು ಶಿಕ್ಷಕರು ಕಲಿಕೆಯ ಸಮರ್ಥ ಮೌಲ್ಯಮಾಪನಕ್ಕೆ ಶಿಕ್ಷಣ ಇಲಾಖೆಯು ವ್ಯವಸ್ಥಿತ ರೂಪುರೇಶೆಗಳನ್ನು ಜಾರಿಯಲ್ಲಿಟ್ಟಿದೆ ಎಂದು ತಿಳಿಸಿದರು.

- Advertisement -

Related news

error: Content is protected !!