Tuesday, April 23, 2024
spot_imgspot_img
spot_imgspot_img

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾಮಹೋತ್ಸವ: ಇಂದು ಬಲ್ನಾಡಿನಿಂದ ಶ್ರೀ ದಂಡ ನಾಯಕ ಮತ್ತು ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ

- Advertisement -G L Acharya panikkar
- Advertisement -

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವದ ಸಂಭ್ರಮವನ್ನು ಕೊರೊನಾ ಕಾರಣದಿಂದಾಗಿ ಸಾಂಪ್ರದಾಯಕವಾಗಿ ಆಚರಿಸಲಾಗುತ್ತಿದ್ದು, ಏ.‌10 ರಂದು ಆರಂಭಗೊಂಡಿರುವ ಜಾತ್ರೋತ್ಸವದಲ್ಲಿ ಪ್ರತೀ ದಿನ ಶ್ರೀ ದೇವರ ಪೇಟೆ ಸವಾರಿ ಒಂದೊಂದು ಭಾಗಕ್ಕೆ ತೆರಳುತ್ತಿದ್ದು ಅಲ್ಲಿ ಸಾಂಪ್ರದಾಯಕವಾಗಿ ಕಟ್ಟೆ ಪೂಜೆಗಳನ್ನು ನೆರವೆರಿಸಲಾಗುತ್ತಿದೆ.

ಪುತ್ತೂರು ಜಾತ್ರಾಮಹೋತ್ಸವದ ಬಹು ಮುಖ್ಯವಾದ ಭಾಗವೆಂದರೆ ಬಲ್ನಾಡಿನಿಂದ ದಂಡ ನಾಯಕ ಮತ್ತು ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ ಹಾಗೂ ಉಳ್ಳಾಲ್ತಿ ಅಮ್ಮ ಹಾಗೂ ಶ್ರೀ ಮಹಾಲಿಂಗೇಶ್ವರ ದೇವರ ಭೇಟಿ ಪ್ರತಿ ವರ್ಷವೂ ಏಪ್ರಿಲ್ 16 ರಂದು ನಡೆಯುತ್ತದೆ. ಈ ದಿನ ವಿಶೇಷವಾಗಿ ಪುತ್ತೂರಿನಲ್ಲಿ ಮಲ್ಲಿಗೆ ಹಬ್ಬ. ಅತ್ಯಂತ ಸುವಾಸನೆ ಭರಿತವಾದ ಮಲ್ಲಿಗೆ ಹೂ ಮಹಾಲಿಂಗೇಶ್ವರ ದೇವರನ್ನು ವರ್ಷಕ್ಕೊಂದು ಬಾರಿ ಭೇಟಿಗೆ ಬರುವ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳಿಗೆ ಅತ್ಯಂತ ಪ್ರಿಯವಾದದ್ದು, ಬಲ್ನಾಡ್‌ ಉಳ್ಳಾಲ್ತಿ ಆಗಮನದ ಸಂದರ್ಭ ಹಾದಿಯುದ್ದಕ್ಕೂ ಭಕ್ತರು ಮಲ್ಲಿಗೆ ಅರ್ಪಿಸುವ ಸಂಪ್ರದಾಯ ಹಿಂದಿನಿಂದಲೂ ಇದೆ. ಈ ದಿನ ಊರಿಡೀ ಮಲ್ಲಿಗೆಯ ಕಂಪು ಬಿರೋ ದಿನವಾಗಿದೆ.

ಮುಸ್ಸಂಜೆಯ ಹೊತ್ತು ಬಲ್ನಾಡು ದೈವಸ್ಥಾನದಿಂದ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಭಂಡಾರ ಹೊರಡಲಿದ್ದು, ರಾತ್ರಿ ಪುತ್ತೂರು ಮಹಾಲಿಂಗೇಶ್ವರ ದೇಗುಲ ತಲುಪಲಿದೆ. ಭಂಡಾರ ಹೊರಡುವಾಗಲೇ ಬಲ್ನಾಡ್‌ ಗ್ರಾಮಸ್ಥರು ತೆಂಗಿನ ಗರಿಗಳಿಂದ ಮಾಡಿದ ಸೂಟೆಗಳನ್ನು ಉರಿಸಿಕೊಂಡು ಅದರ ಬೆಳಕಿನಲ್ಲಿ ದೈವಗಳನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬರುವ ದೃಶ್ಯಾವಳಿ ಅದ್ಭುತವಾಗಿದ್ದು, ಇದನ್ನು ನೋಡಲು ದಾರಿಯುದ್ದಕ್ಕೂ ಭಕ್ತರು ನೆರೆದಿರುತ್ತಾರೆ.

ಉಳ್ಳಾಲ್ತಿ ಕಿರುವಾಳು ಭಂಡಾರವನ್ನು ಪಲ್ಲಕ್ಕಿಯಲ್ಲಿ ಇಟ್ಟು, ಜತೆಗೆ ದರ್ಶನ ಪಾತ್ರಿಯೂ ಸೇರಿಕೊಂಡು ಬರುವ ಪದ್ಧತಿ, ದೈವಗಳ ಪರಿಚಾರಕರು ಜತೆಯಲ್ಲೇ ಇದ್ದು, ಭಕ್ತರು ನೀಡುವ ಮಲ್ಲಿಗೆಯನ್ನು ಸ್ವೀಕರಿಸಿ ಉಳ್ಳಾಲ್ತಿಗೆ ಸಮರ್ಪಿಸಿ ಅಲ್ಲೇ ಪ್ರಸಾದ ರೂಪದಲ್ಲಿ ಮಲ್ಲಿಗೆ ಹಂಚುತ್ತಾರೆ. ದೇವಸ್ಥಾನದ ಸಮೀಪಿಸುತ್ತಿದ್ದಂತೆ ದೇಗುಲದಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ಪ್ರಾಚೀನ ಐತಿಹಾಸಿಕ ಕಟ್ಟೆಯಲ್ಲಿ ಉಳ್ಳಾಲ್ತಿ ಭಂಡಾರವನ್ನು ಇರಿಸುವ ಕ್ರಮವಿದೆ. ದೇವಾಲಯ ತಲುಪಿದ ಬಳಿಕ ಬ್ರಹ್ಮವಾಹಕರು ಮಹಾಲಿಂಗೇಶ್ವರ ದೇವರ ಬಲಿ ಹೊತ್ತುಕೊಂಡು ದೈವಗಳನ್ನು ಭೇಟಿ ಮಾಡುವ ಕ್ರಮವಿದೆ. ಈ ಮುಖಾಮುಖಿಯ ಭಾವುಕ ಕ್ಷ ಣವನ್ನು ಭಕ್ತರು ಕಣ್ಣು ತುಂಬಿಸಿಕೊಳ್ಳುತ್ತಾರೆ.

ಬಳಿಕ ಬಲಿ ಉತ್ಸವ, ಪಲ್ಲಕಿ ಉತ್ಸವ ನಡೆಯುತ್ತದೆ. ನಂತರ ದೇವಾಲಯದ ಪಕ್ಕದ ಐತಿಹಾಸಿಕ ದೇವರ ಕರೆಯಲ್ಲಿ ಶ್ರೀ ಮಹಾಲಿಂಗೇಶ್ವರನ ತೆಪ್ಪೋತ್ಸವ ನಡೆಯುತ್ತದೆ. ಇದಕ್ಕೆ ತುಳುವಲ್ಲಿ ಕೆರೆ ಆಯನ ಎಂದು ಕರೆಯುತ್ತಾರೆ. ಎರಡು ದೋಣಿಗಳನ್ನು ಪರಸ್ಪರ ಒಂದಕ್ಕೊಂದು ಬೆಸೆಯುವಂತೆ ಕಟ್ಟಿ ಅದರ ಮೇಲೆ ಅಗಲವಾದ ಹಲಗೆ ಇಡಲಾಗುತ್ತದೆ. ಆ ಹಲಗೆಯ ಪೀಠದ ಮೇಲೆ ಶ್ರೀ ದೇವರ ಉತ್ಸವ ಮೂರ್ತಿಯನ್ನು ಇಟ್ಟು ಕೆರೆಯಲ್ಲಿ ಬಲಿಯಾನ ನಡೆಸಲಾಗುತ್ತದೆ. ಕೊನೆಯಲ್ಲಿ ಕೆರೆಯ ಮಧ್ಯದಲ್ಲಿರುವ ಗುಂಡದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

driving
- Advertisement -

Related news

error: Content is protected !!