

ಬೆಳಗಾವಿ: ವಾಣಿಜ್ಯ ಗ್ಯಾಸ್ ಸಿಲಿಂಡರ್ ದರವನ್ನು 2,162 ರೂ. ನಿಂದ 3,153 ರೂ. ಗೆ ಏರಿಸಿ, ಒಟ್ಟು 991 ರೂ. ಗಳ ಭಾರೀ ಏರಿಕೆ ಕೇಂದ್ರ ಸರ್ಕಾರದ ಜನವಿರೋಧಿ ನಿರ್ಧಾರವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತೀವ್ರವಾಗಿ ಖಂಡಿಸಿದ್ದಾರೆ.ಈ ಮಟ್ಟದ ಬೆಲೆ ಏರಿಕೆ ಹಿಂದೆಂದೂ ಕಂಡಿಲ್ಲ. ಕೆಲವು ರಾಜ್ಯಗಳ ಚುನಾವಣೆ ಮುಗಿದ ತಕ್ಷಣ ಇಂತಹ ಜನವಿರೋಧಿ ತೀರ್ಮಾನ ಕೈಗೊಂಡಿರುವುದು ಜನರಿಗೆ ನೀಡಿದ ಭರವಸೆಗಳನ್ನು ಮರೆತಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ದರ ಏರಿಕೆಯಿಂದ ಹೋಟೆಲ್ ಉದ್ಯಮದ ಮೇಲೆ ನೇರ ಪರಿಣಾಮ ಬೀಳಲಿದ್ದು, ಈಗಾಗಲೇ ಬೆಲೆ ಏರಿಕೆಯ ಒತ್ತಡದಲ್ಲಿರುವ ವ್ಯಾಪಾರಿಗಳಿಗೆ ಮತ್ತಷ್ಟು ಹೊರೆ ಆಗಲಿದೆ. ಪರಿಣಾಮವಾಗಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದ್ದು, ಸಾಮಾನ್ಯ ಜನರ ದಿನನಿತ್ಯ ಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಹೇಳಿದ್ದಾರೆ.ಕೇಂದ್ರ ಸರ್ಕಾರ ಜನರ ಜೀವನೋಪಾಯ ಸುಲಭಗೊಳಿಸುವ ಬದಲು, ಬೆಲೆ ಏರಿಕೆಯ ಮೂಲಕ ಕಷ್ಟಕರಗೊಳಿಸುತ್ತಿದೆ. ಚುನಾವಣೆಯ ಬಳಿಕ ಜನರಿಗೆ ಮತ್ತೊಮ್ಮೆ ಮೋಸ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದು ಅವರು ಟೀಕಿಸಿದ್ದಾರೆ.ತಕ್ಷಣವೇ ಈ ಅನ್ಯಾಯಕರ ದರ ಏರಿಕೆಯನ್ನು ಹಿಂಪಡೆದು ಜನಪರ ನೀತಿಗಳನ್ನು ಅನುಸರಿಸಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಒತ್ತಾಯಿಸಿದ್ದಾರೆ.









